ಹೊಸಪೇಟೆ: ರಾಜ್ಯದಲ್ಲಿ 'ಶಕ್ತಿ’ ಯೋಜನೆಯಡಿಯಲ್ಲಿ 500 ಕೋಟಿ ಮಂದಿ ಪ್ರಯಾಣಿಸಿದ್ದರ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಅವರು ಭಿತ್ತಿಪತ್ರ ಬಿಡುಗಡೆ ಮಾಡಿ ಸಂಭ್ರಮ ಆಚರಿಸಿದರು.
ಹಂಪಿ ಮತ್ತು ಹುಲಿಗಿ ಕಡೆಗೆ ತೆರಳಲು ಸಿದ್ಧವಾಗಿದ್ದ ಹಾಗೂ ಸಿಂಗರಿಸಿಕೊಂಡಿದ್ದ ಎರಡು ಬಸ್‌ಗಳಿಗೆ ಪೂಜೆ ಸಲ್ಲಿಸಿದ ಶಾಸಕರು, ಮಹಿಳೆಯರ ಜತೆಗೆ ಹಂಪಿ ಬಸ್ ಏರಿ ಒಂದು ಸುತ್ತು ಹಾಕಿ ಬಸ್ ನಿಲ್ದಾಣಕ್ಕೆ ಮತ್ತೆ ಬಂದಿಳಿದರು. ಬಸ್‌ನೊಳಗೆ ಇದ್ದವರಿಗೆ ಸಿಹಿ ಹಂಚಿ ಯೋಜನೆಯ ಫಲಾನುಭವಿ ಮಹಿಳೆಯರೊಂದಿಗೆ ಖುಷಿ ಹಂಚಿಕೊಂಡರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಕುರಿ ಶಿವಮೂರ್ತಿ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಇತರರು ಇದ್ದರು.
7.27 ಕೋಟಿ ಮಂದಿ ಪ್ರಯಾಣ: ಜಿಲ್ಲೆಯಲ್ಲಿ ‘ಶಕ್ತಿ’ ಯೋಜನೆಯಡಿಯಲ್ಲಿ 7.27 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ₹281.59 ಕೋಟಿ ಮೊತ್ತದ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ ವಯಸ್ಕ ಮಹಿಳೆಯರು 6.97 ಕೋಟಿ, 30.71 ಲಕ್ಷ ಮಕ್ಕಳು ಎಂದು ಕುರಿ ಶಿವಮೂರ್ತಿ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಹೊಸಪೇಟೆ ಘಟಕದಲ್ಲಿ 1.83 ಕೋಟಿ ಮಂದಿ (₹75.99 ಕೋಟಿ ವರಮಾನ) ಪ್ರಯಾಣಿಸಿದ್ದರೆ, ಕೂಡ್ಲಿಗಿ ಘಟಕದಲ್ಲಿ 1.48 ಕೋಟಿ ಮಂದಿ (₹59.61 ಕೋಟಿ), ಹಡಗಲಿಯಲ್ಲಿ 1.78 ಕೋಟಿ ಮಂದಿ (₹60.18 ಕೋಟಿ), ಹಗರಿಬೊಮ್ಮನಹಳ್ಳಿಯಲ್ಲಿ 1.12 ಕೋಟಿ ಮಂದಿ (₹44.09 ಕೋಟಿ), ಹರಪನಹಳ್ಳಿಯಲ್ಲಿ 1.04 ಕೋಟಿ ಮಂದಿ (₹41.71 ಕೋಟಿ) ಪ್ರಯಾಣಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.