ADVERTISEMENT

ವಿಜಯನಗರ: ಅಪರೂಪದ ಷಟ್ಪದಿ ಮಹಾಕಾವ್ಯ ಸಿದ್ಧ, ಕೃತಿ ಡಿ.28ಕ್ಕೆ ಬಿಡುಗಡೆ

ರಂಗೋಪಂತ ನಾಗರಾಜರಾಯರ ಕೃತಿ ಡಿ.28ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:57 IST
Last Updated 16 ಡಿಸೆಂಬರ್ 2025, 5:57 IST
ತಮ್ಮ ಕೈಬರಹದ ಮಹಾಕಾವ್ಯದೊಂದಿಗೆ ರಂಗೋಪಂತ ನಾಗರಾಯರಾಯರು
ತಮ್ಮ ಕೈಬರಹದ ಮಹಾಕಾವ್ಯದೊಂದಿಗೆ ರಂಗೋಪಂತ ನಾಗರಾಯರಾಯರು   

ಹೊಸ‍ಪೇಟೆ: ನಗರದ ನಿವೃತ್ತ ಹಿಂದಿ ಶಿಕ್ಷಕ ಹಾಗೂ ಗಮಕ ಕಲಾವಿದ ಕೃಷ್ಣಕವಿ ರಂಗೋಪಂತ ನಾಗರಾಜರಾಯರು (88) ರಚಿಸಿರುವ ಹಾಗೂ ಸಾಹಿತಿ, ಶಿಕ್ಷಕ ಎತ್ನಳ್ಳಿ ಮಲ್ಲಯ್ಯ ಸಂಪಾದಿಸಿರುವ ‘ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ’ನ ಎರಡು ಆವೃತ್ತಿಗಳು ಸಿದ್ಧವಾಗಿದ್ದು, ಡಿ.28ರಂದು ಇಲ್ಲಿ ಹಿರಿಯ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗರಾಜರಾಯರು ತಮ್ಮ ಕೈಬರಹದ ಕೃತಿಯನ್ನು ಪರಿಚಯಿಸಿ ಹಾಗೂ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಈ ಮಾಹಿತಿ ನೀಡಿದರು.

‘ಈ ಕೃತಿ ಹೊರಬರುತ್ತದೆ ಎಂಬ ನಂಬಿಕೆಯೇ ನನಗೆ ಇರಲಿಲ್ಲ, ಏಕೆಂದರೆ ಹಲವು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿರಲಿಲ್ಲ. ಆದರೆ ಎತ್ನಳ್ಳಿ ಮಲ್ಲಯ್ಯ ಅವರಿಂದಾಗಿ ಮಹಾಕಾವ್ಯ ಓದುಗರ ಕೈಗೆ ತಲುಪುವಂತಾಗಿದೆ’ ಎಂದರು.

ADVERTISEMENT

ನಿವೃತ್ತ ಪ್ರಾಂಶುಪಾಲ ಪ್ರೊ.ಯು.ರಾಘವೇಂದ್ರ ರಾವ್‌ ಮಾತನಾಡಿ, ರಂಗೋಪಂತ ನಾಗರಾಜರಾಯರು ಭಾಮಿನಿ ಷಟ್ಪದಿ ಪ್ರಕಾರದಲ್ಲಿ ಬರೆದ 16 ಸಾವಿರ ಷಟ್ಪದಿಗಳ ಮಹಾಕಾವ್ಯ ಇದು. ತಲಾ 800 ಪುಟಗಳ ಎರಡು ಸಂಪುಟಗಳು ಸಿದ್ಧವಾಗಿವೆ. ಕುವೆಂಪು ಅವರ ಬಳಿಕ ಮಹಾಕಾವ್ಯ ರಚಿಸಿದವರು ವಿರಳ, ಅಂತಹ ಅಪರೂಪದ ಕವಿ ನಾಗರಾಜರಾಯರು 51 ವರ್ಷಗಳ ಹಿಂದೆಯೇ ಈ ಮಹಾಕಾವ್ಯ ರಚಿಸಿದ್ದರು ಎಂದರು.

ವಿಜಯನಗರ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಧುರಚನ್ನ ಶಾಸ್ತ್ರಿ ಮಾತನಾಡಿ, ಡಿ.28ರಂದು ಬೆಳಿಗ್ಗೆ 10.30ಕ್ಕೆ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರವಚನಕಾರ ಪಾವಗಡ ಪ್ರಕಾಶ ರಾವ್‌ ಮಹಾಕಾವ್ಯದ ಪರಿಚಯ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಮೊದಲು ವಡಕರಾಯ ದೇವಸ್ಥಾನದಿಂದ ರಥದಲ್ಲಿ ಕವಿ, ಮಹಾಕಾವ್ಯಗಳ ಮೆರವಣಿಗೆ ನಡೆಯಲಿದೆ ಎಂದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ವೆಂಕಟೇಶ್‌, ಶಿಕ್ಷಕ ಹನುಮೇಶ ಪಾಟೀಲ್‌, ಗುಜ್ಜಲ್ ಗಣೇಶ್‌ ಇದ್ದರು.

ವರದಿಗೆ ಸ್ಪಂದಿಸಿದ ಜನ ಐದೂವರೆ ತಿಂಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ‘ಷಟ್ಪದಿಗಳ ಮಹಾಕಾವ್ಯಕ್ಕೆ ಸಿಗದ ಪ್ರಕಾಶನ ಭಾಗ್ಯ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ ಹತ್ತಾರು ಕನ್ನಡ ಮನಸ್ಸುಗಳು ಎತ್ನಳ್ಳಿ ಮಲ್ಲಯ್ಯ ಅವರ ಬೆಂಬಲಕ್ಕೆ ನಿಂತು ಕೃತಿ ಹೊರತರುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವು ಹಾಗೂ ₹1.80 ಲಕ್ಷದಷ್ಟು ಧನಸಹಾಯವೂ ಹರಿದುಬಂತು. ಸುಮಾರು ಐದಾರು ವರ್ಷಗಳಿಂದ ಕುಂಟುತ್ತ ಸಾಗಿದ್ದ ಮಹಾಕಾವ್ಯದ ಸಂಪಾದನೆ ಕಾರ್ಯ ಬಳಿಕ ಚುರುಕುಗೊಂಡು ಇದೀಗ ₹10 ಲಕ್ಷ ವೆಚ್ಚದಲ್ಲಿ ಕೃತಿ ಹೊರಬರುವ ಹಂತಕ್ಕೆ ಬಂದು ನಿಂತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.