ADVERTISEMENT

ಶಾಸಕ, ಸಂಸದರನ್ನು ಹುಡುಕಿಕೊಡಿ; ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

ಕೋವಿಡ್‌ ಸಂಕಷ್ಟದಲ್ಲಿ ಜನರ ನೆರವಿಗೆ ಬಾರದ ಜನಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 30 ಮೇ 2021, 11:59 IST
Last Updated 30 ಮೇ 2021, 11:59 IST
ಶಿವುಕುಮಾರ್‌ ಗಡಿಗಿ ಅವರು ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ
ಶಿವುಕುಮಾರ್‌ ಗಡಿಗಿ ಅವರು ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ   

ಹೂವಿನಹಡಗಲಿ: ಕೋವಿಡ್ ಸಂಕಷ್ಟದ ಕಾಲದಲ್ಲಿ ನೊಂದವರ ಕಷ್ಟ ಕೇಳದೇ ಜನರಿಂದ ಅಂತರ ಕಾಪಾಡಿಕೊಂಡಿರುವ ಕ್ಷೇತ್ರದ ಶಾಸಕ, ಜಿಲ್ಲೆಯ ಸಂಸದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕೋವಿಡ್ ಸೋಂಕು ಹಳ್ಳಿಗಳಿಗೂ ವ್ಯಾಪಿಸಿರುವುದರಿಂದ ಜೀವ ಉಳಿಸಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೇ ರೈತರು ಮನನೊಂದು ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ. ಹಿಂದಿನ ವರ್ಷದ ಲಾಕ್ ಡೌನ್ ಹಾಗೂ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧದಿಂದಾಗಿ ದಿನದ ದುಡಿಮೆ ನಂಬಿ ಬದುಕುವವರು ತೊಂದರೆಯಲ್ಲಿದ್ದಾರೆ. ಇಲ್ಲಿನ ಕೆಲ ಸಂಘ ಸಂಸ್ಥೆಗಳು, ಮಾಜಿ ಶಾಸಕರು, ಬಿಜೆಪಿ ಮುಖಂಡರು, ದಾನಿಗಳು, ಮಠಾಧೀಶರು ಅವಶ್ಯಕತೆ ಇರುವವರಿಗೆ ಆಹಾರ ಕಿಟ್, ಇತರೆ ಪರಿಹಾರ ಸಾಮಗ್ರಿ ನೀಡುತ್ತಿದ್ದಾರೆ.

ಆದರೆ, ಜನಪ್ರತಿನಿಧಿಗಳಾದವರು ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚದೇ ಅದಕ್ಕೆಲ್ಲಾ ಸರ್ಕಾರ ಇದೆಯಲ್ಲಾ ಎಂದು ಭಾವಿಸಿ ಜನರಿಂದ ದೂರವಾಗಿದ್ದಾರೆ ಎಂದು ಜಾಲತಾಣದಲ್ಲಿ ಟೀಕೆಗೆ ಒಳಗಾಗಿದ್ದಾರೆ.

ADVERTISEMENT

ಬಿಜೆಪಿ ಯುವ ಮೋರ್ಚಾ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಗಡಿಗಿ ತಮ್ಮ ಫೇಸ್ ಬುಕ್ ನಲ್ಲಿ, ‘ಚುನಾವಣೆ ಬಂದಾಗ ಮುನ್ನೂರು, ಇನ್ನೂರು ಕೊಟ್ಟು ಮತ ಕೊಂಡುಕೊಳ್ಳುವುದಲ್ಲ. ಪ್ರಜೆಗಳ ಸಂಕಷ್ಟದ ಸಮಯದಲ್ಲಿ ನೆರವಾಗುವವನೇ ನಿಜವಾದ ನಾಯಕ’ ಎಂದು ಬರೆದುಕೊಂಡಿದ್ದಾರೆ.

ಅವರ ಮತ್ತೊಂದು ಪೋಸ್ಟ್ ನಲ್ಲಿ ‘ಹೂವಿನಹಡಗಲಿ ಕ್ಷೇತ್ರದ ಎಂಎಲ್ಎ ಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಎಂಪಿಗೂ ಭಾವಪೂರ್ಣ ಶ್ರದ್ದಾಂಜಲಿ?’ ಎಂದು ಬರೆದಿದ್ದಾರೆ. ಇದಕ್ಕೆ ಪಕ್ಷಭೇದ ಮರೆತು ಜನಪ್ರತಿನಿಧಿಗಳ ನಡೆಯನ್ನು ಜನ ಖಂಡಿಸಿದ್ದಾರೆ.

ಬಿಜೆಪಿ ಮುಖಂಡ ಎಂ.ಬಿ.ಬಸವರಾಜ ಪ್ರತಿಕ್ರಿಯಿಸಿ, ಎಂಎಲ್ಎ, ಎಂಪಿ ಇಬ್ಬರೂ ಒಂದೇ ಕ್ಷೇತ್ರದವರು, ಇಬ್ಬರ ಬುದ್ದಿಯೂ ಒಂದೇ ಇದೆ. ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ. ಶ್ರೀಶ್ರೇಷ್ಠ ಹಿಂದೂ ಎಂಬುವವರು ‘ಮತ್ತೊಮ್ಮೆ ಹುಟ್ಟಿ ಬರಬೇಡಿ’ ಎಂದಿದ್ದಾರೆ.

ಎಂ.ಪಿ.ಎಂ. ಹಾಲಸ್ವಾಮಿ ಎಂಬುವವರು ‘ಹಡಗಲಿ ಕ್ಷೇತ್ರದ ಜನತೆ ಅರ್ಥಮಾಡಿಕೊಳ್ಳಬೇಕು. ಮನೆ ಮಗ ಮನೆಮಗನೇ, ದತ್ತು ಪುತ್ರ ದತ್ತುಪತ್ರನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಎಸ್.ಕೆ. ಸೋಗಿಯವರು ‘ಒಬ್ಬರಾದರೂ ಬಂದು ಕ್ಷೇತ್ರದ ಸಮಸ್ಯೆ ಕೇಳಿಲ್ಲ. ಶಾಸಕ, ಸಂಸದ ಇಬ್ಬರೂ ಕಾಣೆಯಾಗಿದ್ದಾರೆ, ಹುಡುಕಿಕೊಡಿ. ಹುಡುಕಿ ಕೊಟ್ಟವರಿಗೆ ಬಹುಮಾನ’ ಎಂದು ಬರೆದಿದ್ದಾರೆ.

ವಿನಾಯಕ ಯಳಗೇರಿ ಕಮೆಂಟ್ ನಲ್ಲಿ ‘ರಾಜಕಾರಣಿಗಳ ನಡೆಯನ್ನು ಹೀಗೆ ಪಕ್ಷಾತೀತವಾಗಿ ವಿರೋಧಿಸಿದಾಗ ದೇಶಕ್ಕೆ ಒಳ್ಳೆಯದಾಗುತ್ತದೆ’ ಎಂದು ಹೇಳಿದ್ದಾರೆ. ನಾಗರಾಜ ಜುಜುರಿ ಎಂಬುವವರು ‘ನಮ್ಮ ಜನಪ್ರಿಯ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹಡಗಲಿ ಕ್ಷೇತ್ರದ ಜನತೆಗೆ ದೇವರು’ ಎಂದು ಹೇಳಿಕೊಂಡಿದ್ದಾರೆ. 14 ಜನರು ‘ಓಂ ಶಾಂತಿ, ರಿಪ್’ ಎಂದು ಬರೆದಿದ್ದಾರೆ.

ಶಾಸಕ, ಸಂಸದರು ಬೇರೆ ಬೇರೆ ಪಕ್ಷದವರಾಗಿದ್ದರೂ ಅವರ ಹೊಂದಾಣಿಕೆ ರಾಜಕಾರಣದ ಬಗ್ಗೆಯೂ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಸಂಬಂಧ ಶಾಸಕ, ಸಂಸದರನ್ನು ಕರೆ ಮಾಡಿದಾಗ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.