ಹೊಸಪೇಟೆ (ವಿಜಯನಗರ): ಇಂದು ಮುಕ್ತ ಚಿಂತನೆಗೆ ಅಪಾಯ ಎದುರಾಗಿದೆ. ಅದಕ್ಕಾಗಿಯೇ ಮುಕ್ತ ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಅನೇಕ ಜನರು ಮತ್ತು ಸಂಘಟನೆಗಳು ನಿರಂತರವಾಗಿ ಹೋರಾಡುತ್ತಿವೆ ಎಂದು ವಿಮರ್ಶಕ ಎಸ್.ಸಿರಾಜ್ ಅಹಮದ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ವಿಮರ್ಶೆ ವಿಚಾರ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
‘ಈ ಹಿಂದೆ ಹಲವು ಚಿಂತಕರು, ಬರಹಗಾರರು ಮತ್ತು ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ದಾಳಿಗೆ ಒಳಗಾಗಿದ್ದಾರೆ. ಇದು ವ್ಯಕ್ತಿಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುತ್ತಿದೆ. ಈ ಅಪಾಯಗಳ ಹೊರತಾಗಿಯೂ, ಅದರ ವಿರುದ್ಧ ಹೋರಾಟವೂ ಮುಂದುವರಿದಿದೆ. ಇದು ಪ್ರಜಾಪ್ರಭುತ್ವದ ಅಡಿಪಾಯದ ಒಂದು ಭಾಗವಾಗಿದ್ದು, ಸಮಾಜದ ಆರೋಗ್ಯಕರ ಬೆಳವಣಿಗೆಗೆ ಇದು ಅಗತ್ಯ’ ಎಂದರು.
ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಸಾಹಿತ್ಯದ ಪ್ರಕಾರಗಳು ಯಾವ ದಿಕ್ಕಿನಲ್ಲಿ ನಡೆಯಬೇಕು ಎಂದು ವಿಮರ್ಶೆ ಅವಕಾಶ ನೀಡುತ್ತದೆ. ಒಂದು ಸಾಹಿತ್ಯ ಜನಮುಖಿ ಆಗಬೇಕಾದರೆ ಅದನ್ನು ವಿಮರ್ಶೆ ಮಾನದಂಡದಲ್ಲಿ ಅಳವಡಿಸಲೇಬೇಕಾಗುತ್ತದೆ ಎಂದರು.
ಸಾಹಿತ್ಯ ಅಕಾಡೆಮಿ, ದಕ್ಷಿಣ ಪ್ರಾದೇಶಿಕ ಮಂಡಳಿಯ ಸಂಚಾಲಕರಾದ ಸಿ.ಮೃಣಾಳಿನಿ ಮಾತನಾಡಿ, ದಕ್ಷಿಣ ಭಾರತೀಯ ಸಾಹಿತ್ಯ ಇತರೆ ಭಾಷೆಗಳಿಗೆ ಅನುವಾದಗೊಂಡಾಗ ಅದರ ಮೌಲ್ಯ ಹೆಚ್ಚುತ್ತದೆ. ಸಾಹಿತ್ಯ ಮುಕ್ತವಾದಂತೆ ಭಾಷೆ ಅಡೆತಡೆಗಳು ಕಡಿಮೆಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸಂಚಾಲಕ ಪ್ರೊ.ಬಸವರಾಜ ಕಲ್ಗುಡಿ ಮಾತನಾಡಿ, ಅನ್ಯ ಭಾಷೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡುವುದರಿಂದ ಭಾಷೆಯ ಮೌಲ್ಯ ತಿಳಿಯುತ್ತದೆ ಎಂದರು.
ಅಕಾಡೆಮಿಯ ಪ್ರಾದೇಶಿಕ ಕಚೇರಿ ಮೇಲ್ವಿಚಾರಕ ಎಲ್. ಸುರೇಶ, ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ಇತರರು ಇದ್ದರು. ಸಂಜೆ ಸಮಾರೋಪ ಸಮಾರಂಭ ನಡೆದಿದ್ದು, ಅಕಾಡೆಮಿಯ ಸಾಮಾನ್ಯ ಸಲಹಾ ಮಂಡಳಿಯ ಸದಸ್ಯ ಮನು ಬಳಿಗಾರ್ ಸಮಾರೋಪ ಭಾಷಣ ಮಾಡಿದರು.
ನಾಲ್ಕು ವಿಚಾರ ಗೋಷ್ಠಿಗಳಲ್ಲಿ ಚಿಂತನ ಮಂಥನ ದಕ್ಷಿಣದ ನಾಲ್ಕು ಭಾಷೆಗಳ ವಿಮರ್ಶೆ ಅವಲೋಕನ ಸಾಹಿತ್ಯ ವಿಮರ್ಶೆಯ ಆಳ ತಿಳಿಯಲು ಸಲಹೆ
‘ಸಾಹಿತ್ಯ ಮಾರಾಟದ ಸರಕು’ ‘
ಇತ್ತೀಚಿನ ದಿನಗಳಲ್ಲಿ ಸಾಹಿತ್ಯವು ಮಾರಾಟದ ಸರಕು ಆಗಿದ್ದು ಇಂದು ಯಾವುದೇ ಸಾಹಿತಿ ವೈಚಾರಿಕ ಪ್ರಜ್ಞೆ ಮೂಲಕ ಕೆಲಸ ಮಾಡುತ್ತಿಲ್ಲ ಎನ್ನುವುದು ನೋವಿನ ಸಂಗತಿ. ವಿಮರ್ಶಾತ್ಮಕ ಚಿಂತನೆ ಇಲ್ಲದಿದ್ದರೆ ಚಿಂತನಶೀಲ ಸಮಾಜ ಕಟ್ಟಲು ಸಾಧ್ಯವಿಲ್ಲ. ಬುದ್ಧಿಜೀವಿಗಳ ಬದಲು ಗೂಗಲ್ ಸ್ಕಾಲರ್‌ಗಳು ಮಾತನಾಡುತ್ತಿರುವುದು ದುರಂತವೇ ಸರಿ’ ಎಂದು ವಿಮರ್ಶಕ ಸಿರಾಜ್ ಅಹಮದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.