ಹರಪನಹಳ್ಳಿ: ತಾಲ್ಲೂಕಿನ ಮೂಲಕ ಹಾದು ಹೋಗಿರುವ ಹಾಗೂ ಉತ್ತರ, ಮಧ್ಯ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳಲ್ಲಿ ಸಾಲು ಸಾಲು ಗುಂಡಿಗಳು ಬಾಯ್ದೆರೆದಿದ್ದು, ಸುಗಮ ರಸ್ತೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ಇದೆ.
ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿ ಮೂಲಕ ಶಿವಮೊಗ್ಗಕ್ಕೆ ಸಂಪರ್ಕಿಸುವ, ಹಡಗಲಿಯಿಂದ ಮಂಡ್ಯಕ್ಕೆ ಸಂಪರ್ಕಿಸುವ ಹಾಗೂ ಎಕ್ಕುಂಬಿಯಿಂದ ಮೊಳಕಾಲ್ಮೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ನಿತ್ಯ ನರಕ ದರ್ಶನ ನಿಶ್ಚಿತ ಎಂಬಂತಾಗಿದೆ.
ತಾಲ್ಲೂಕಿನ ನಂದಿಬೇವೂರು ಗ್ರಾಮದ ಸರ್ವೆ ನಂಬರ್ 177ರಲ್ಲಿ ಪ್ರಾರಂಭವಾಗುವ ಶಿವಮೊಗ್ಗ–ಹೊಸಪೇಟೆ ರಾಜ್ಯ ಹೆದ್ದಾರಿ-25ರಲ್ಲಿ ಕೋಡಿಹಳ್ಳಿ ಕ್ರಾಸ್ ತನಕವೂ ಗುಂಡಿಗಳದ್ದೇ ಕಾರುಬಾರು. ಶೃಂಗಾರತೋಟ, ಕಾಯಕದಹಳ್ಳಿ, ಹರಪನಹಳ್ಳಿ, ಮೆಳ್ಳೆಕಟ್ಟೆ, ಅನಂತನಹಳ್ಳಿವರೆಗೂ ಉತ್ತಮವಿರುವ ರಸ್ತೆ, ಮುಂದೆ ಚಿರಸ್ತಹಳ್ಳಿ, ತೆಲಿಗಿ ದುಗ್ಗಾವತಿ ಗ್ರಾಮದ ಸರ್ವೆ ನಂಬರ್ 23ರ 44.5 ಕಿ.ಮೀ.ಕ್ರಮಿಸಿ ತಾಲ್ಲೂಕಿನ ಗಡಿಗೆ ಅಂತ್ಯಗೊಳ್ಳುವ ರಸ್ತೆಯಲ್ಲಿ ಗುಂಡಿಗಳ ಹಾವಳಿ ಹೆಚ್ಚಾಗಿದೆ. ಈ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಯೇ ಇಲ್ಲ ಎನ್ನುವ ದೂರು ವಾಹನ ಚಾಲಕರದ್ದು.
ತಾಲ್ಲೂಕಿನ ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 215 ಮತ್ತು 216ರಲ್ಲಿ ಪ್ರಾರಂಭವಾಗುವ ಮಂಡ್ಯ–ಹಡಗಲಿ ರಾಜ್ಯ ಹೆದ್ದಾರಿಯು ಉಚ್ಚಂಗಿದುರ್ಗ, ತೌಡೂರು, ಅರಸೀಕೆರೆ, ಹಿಕ್ಕಿಮಗೇರಿ, ನಿಚ್ಚವ್ವನಹಳ್ಳಿ, ಕುಮಾರನಹಳ್ಳಿ, ಅಡವಿಹಳ್ಳಿ, ಹರಪನಹಳ್ಳಿ, ಕೂಲಹಳ್ಳಿ, ಬಂಡ್ರಿ, ಕಾನಹಳ್ಳಿ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ಮೂರ್ನಾಲ್ಕು ತಿಂಗಳ ಹಿಂದೆ ಅಪೂರ್ಣ ದುರಸ್ತಿ ನಡೆದಿದೆ. ಟೋಲ್ ಗೇಟ್‌ನಿಂದ ಎರಡೆತ್ತಿನಹಳ್ಳಿ ಸಮೀಪ ಒಂದು ಭಾಗಕ್ಕೆ ಮಾತ್ರ ಡಾಂಬರು ಹಾಕಲಾಗಿದೆ. ಹರಪನಹಳ್ಳಿಯ ಹಳೆ ತಹಶೀಲ್ದಾರ್ ಕಚೇರಿಯಿಂದ ಅವೈಜ್ಞಾನಿಕ ಡಾಂಬರು ಮಾಡಿದ ಪರಿಣಾಮ ವಾಹನಗಳು ಜಾರಿ ಬೀಳುತ್ತಿವೆ.
ಎಕ್ಕುಂಬಿ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ-2 ತಾಲ್ಲೂಕಿನ ಮಲ್ಲಜ್ಜನಕಟ್ಟೆಯಿಂದ ಮತ್ತಿಹಳ್ಳಿ ಕ್ರಾಸ್ ವರೆಗೂ ಹಾದು ಹೋಗಿದೆ. ಬೆಣ್ಣಿಹಳ್ಳಿ, ನೀಲಗುಂದ, ಕುಂಚೂರು ವರೆಗೂ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಅಲ್ಲಲ್ಲಿ ಮಾತ್ರ ದುರಸ್ತಿಗೊಳಿಸಿದ್ದು, ಹಲವೆಡೆ ನಿರ್ಲಕ್ಷ್ಯ ಮಾಡಲಾಗಿದೆ. ಕೂಡಲೇ ಮೂರು ರಾಜ್ಯ ಹೆದ್ದಾರಿಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.
ರಾಜ್ಯ ಹೆದ್ದಾರಿಗಳು ಶಿವಮೊಗ್ಗ–ಹೊಸಪೇಟೆ ರಾಜ್ಯ ಹೆದ್ದಾರಿ 25 ಎಕ್ಕುಂಬಿ–ಮೊಳಕಾಲ್ಮೂರು ರಾಜ್ಯ ಹೆದ್ದಾರಿ 2 ಮಂಡ್ಯ–ಹಡಗಲಿ ರಾಜ್ಯ ಹೆದ್ದಾರಿ 47
ಗುಂಡಿಗಳು ಬಿದ್ದು ಮುಖ್ಯರಸ್ತೆಗಳು ಹದಗೆಟ್ಟರೂ ಸಂಬಂಧಪಟ್ಟ ಇಲಾಖೆಗಳು ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿವೆ. ಈಚೆಗೆ ಅವೈಜ್ಞಾನಿಕವಾಗಿ ಡಾಂಬರು ಹಾಕಿದ್ದು ಎಲ್ಲವನ್ನೂ ಹೇಳಿಬಿಡುತ್ತದೆಗುಡಿಹಳ್ಳಿ ಹಾಲೇಶ್ ಜಿಲ್ಲಾ ಸಮಿತಿ ಅಧ್ಯಕ್ಷ ಅಖಿಲ ಭಾರತ ಕಿಸಾನ್ ಸಭಾ
ನಂದಿಬೇವೂರು ಕಣಿವಿಹಳ್ಳಿ ಶೃಂಗಾರತೋಟದ ನಡುವೆ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ಪುಣ್ಯ ಕಟ್ಟಿಕೊಳ್ಳಿ ಪ್ರಯಾಣಿಕರು ಇಲ್ಲಿ ನಿತ್ಯ ನರಕ ದರ್ಶನ ಮಾಡುತ್ತಿದ್ದಾರೆಕೊಟ್ಟೂರು ಮುನೇಗೌಡ ಪ್ರಯಾಣಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.