
ಹೊಸಪೇಟೆ (ವಿಜಯನಗರ): ನಗರದ ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ 9ನೇ ಸರ್ವಧರ್ಮ ಮಹಾರಥೋತ್ಸವ ಫೆ.27ರಂದು ನಡೆಯಲಿದ್ದು, ಅದಕ್ಕೆ ಸ್ವಾಗತ ನೀಡುವ ರೀತಿಯಲ್ಲಿ ಮೊದಲಾಗಿ ಸರ್ವಧರ್ಮ ಸಂದೇಶ ಸಾರುವ ಮೂರು ದಿನಗಳ ರಾಜ್ಯಮಟ್ಟದ ಯುವ ಕಲಾಶಿಬಿರ ಮಠದಲ್ಲಿ ಬುಧವಾರ ಆರಂಭವಾಯಿತು.
ಯುವ ಕಲಾವಿದ ದೀಪಕ್ ಅವರ ಮುಂದಾಳತ್ವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ 10 ಮಂದಿ ಯುವ ಕಲಾವಿದರು ಸರ್ವಧರ್ಮ ಸಾರುವ ಕಲಾಕೃತಿ ಸಹಿತ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದು, ನೂರಾರು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಹ ಕಲಾಕೃತಿ ರಚನೆಯ ಮಾರ್ಗದರ್ಶನ ನೀಡಲಿದ್ದಾರೆ.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಕುಂಚದಲ್ಲಿ ಬಣ್ಣ ಹಚ್ಚುವ ಮೂಲಕ ಕಲಾಶಿಬಿರಕ್ಕೆ ಚಾಲನೆ ನೀಡಿದರು. ಇಂದಿನ ದ್ವೇಷಮಯ ವಾತಾವರಣದಲ್ಲಿ ಸರ್ವ ಧರ್ಮಗಳ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಮಠದ ಕಾಳಜಿಯನ್ನು ಕೊಂಡಾಡಿ, ‘ಏನಾದರೂ ಆಗಿ, ಮೊದಲು ಮಾನವರಾಗಿ’ ಎಂದು ಕಿವಿಮಾತು ಹೇಳಿದರು.
ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವಿಜಯನಗರ ಸಾಮ್ರಾಜ್ಯದ ಸಮಯದಲ್ಲೇ ಇದ್ದ ಮಠ ನಡೆದುಬಂದ ಪರಂಪರೆಯ ಮುಂದುವರಿದ ಭಾಗವಾಗಿ ಈ ಸರ್ವಧರ್ಮ ಜಾತ್ರೆ, ಮಹಾರಥೋತ್ಸವ ನಡೆಯುತ್ತಿದೆ. ಎಲ್ಲಾ ಧರ್ಮಗಳ ಗ್ರಂಥಗಳನ್ನು ರಥದಲ್ಲಿಟ್ಟು, ಅದನ್ನು ಎಳೆಯುವ ಸಂಪ್ರದಾಯ ರಾಜ್ಯದ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಡಿವೈಎಸ್‌ಪಿ ಟಿ.ಮಂಜುನಾಥ್, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಎ.ಶಿವಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಇದ್ದರು.
ಕುಮಟಾದ ವಿಶ್ವೇಶ್ವರ ಪಟಗಾರ, ತುಮಕೂರಿನ ಎಂ.ವೈ.ರಾಜೀವ್, ಕೊಪ್ಪಳದ ಯಮನೂರ್ ಸಾಬ್, ಮಂಗಳೂರಿನ ಕೆ.ಟಿ.ಶಿವಪ್ರಸಾದ್, ಹೊಸಪೇಟೆಯ ಪರಶುರಾಮ, ಮೈಸೂರಿನ ಪ್ರೀತಂ ಖಾನಪೇಟ, ಹುಬ್ಬಳ್ಳಿಯ ಪವನ್ ಕೆ.ಅಂಕಲಕೋಟಿ, ಧಾರವಾಡದ ವಿನ್ಯಾಸ ಕಾಟೇನಹಳ್ಳಿ, ಗದಗದ ಪ್ರವೀಣ ಮನೋಹರ ಗಾಯಕರ, ಬೆಂಗಳೂರಿನ ಈಶ್ವರಯ್ಯ ಮಠಪತಿ ಅವರು ಕಲಾಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.