ADVERTISEMENT

ಸಕ್ಕರೆ ಕಾರ್ಖಾನೆ ಸ್ಥಾಪನೆ | ಸರ್ಕಾರಕ್ಕೆ 15 ದಿನ ಗಡುವು ನೀಡಿದ ರೈತರ ಸಂಘ

ಜೂನ್ 10ರಿಂದ ಅನಿರ್ದಿಷ್ಟ ಧರಣಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 10:30 IST
Last Updated 26 ಮೇ 2025, 10:30 IST
<div class="paragraphs"><p>ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಕಟಿಗಿ ಜಂಬಯ್ಯ ನಾಯಕ ಮಾತನಾಡಿದರು</p></div>

ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಕಟಿಗಿ ಜಂಬಯ್ಯ ನಾಯಕ ಮಾತನಾಡಿದರು

   

ಹೊಸಪೇಟೆ (ವಿಜಯನಗರ): ನಗರದಲ್ಲಿ ಮೇ 20ರಂದು ನಡೆದ ಸಮರ್ಪಣಾ ಸಂಕಲ್ಪ ಸಮಾವೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಚಕಾರ ಎತ್ತದ್ದರಿಂದ ಸಿಟ್ಟುಗೊಂಡಿರುವ ರೈತರು, ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು 15  ದಿನಗಳ ಗಡುವು ನೀಡಿದ್ದಾರೆ, ತಪ್ಪಿದಲ್ಲಿ ಜೂನ್‌ 10ರಿಂದ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಕಟಿಗಿ ಜಂಬಯ್ಯ ನಾಯಕ ಮತ್ತು ಇತರ ಪದಾಧಿಕಾರಿಗಳು ಸೋಮವಾರ ಇಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಮತ್ತು ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರು ಸಕ್ಕರೆ ಕಾರ್ಖಾನೆಯ ಅಗತ್ಯದ ಕುರಿತು ಸಿಎಂ ಅವರಿಗೆ ಮನವರಿಕೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ, ಖುದ್ದು ಭೇಟಿ ಮಾಡಿ ಒತ್ತಾಯಿಸಲಾಗಿದೆ. ಇನ್ನು ಮುಂದೆ ಈ ಮನವಿಯನ್ನೂ ಕೊಡುವುದಿಲ್ಲ, ಭೇಟಿಯೂ ಆಗುವುದಿಲ್ಲ. ತಾಲ್ಲೂಕು ಕಚೇರಿ ಮುಂಭಾಗ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು. ಅವರು ಏನಿದ್ದರೂ ಧರಣಿ ಸ್ಥಳಕ್ಕೇ ಬಂದು ನಮ್ಮನ್ನು ಭೇಟಿ ಮಾಡಬೇಕು’ ಎಂದು ಜಂಬಯ್ಯ ನಾಯಕ ಹೇಳಿದರು.

ರೈತರಲ್ಲಿ ಒಗ್ಗಟ್ಟಿಲ್ಲ: ‘ರೈತರಲ್ಲಿ ಒಗ್ಗಟ್ಟು ಇಲ್ಲದ ಹುಳುಕನ್ನು ರಾಜಕಾರಣಿಗಳು ತಮಗೆ ಬೇಕಾದಂತೆ ಬಳಸುತ್ತಿದ್ದಾರೆ. ಸಮಾವೇಶಕ್ಕೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಸಕ್ಕರೆ ಕಾರ್ಖಾನೆ ಬಗ್ಗೆ ಸಿಎಂ ಅವರೇ ಘೋಷಿಸುತ್ತಾರೆ ಎಂಬ ಸುಳ್ಳು ಭರವಸೆಯನ್ನು ಸಚಿವ ಜಮೀರ್ ಮತ್ತು ಶಾಸಕ ಗವಿಯಪ್ಪ ನೀಡಿದರು. ಸಮಾವೇಶ ಮುಗಿದ ಬಳಿಕವಾದರೂ ಅವರು ರೈತರನ್ನು ಕರೆದು ಘೋಷಣೆ ಮಾಡಲು ಉಂಟಾದ ಅಡಚಣೆ ಬಗ್ಗೆ ಹೇಳಲಿಲ್ಲ. ಹೀಗಾಗಿ ನಮಗೆ ಉಳಿದಿರುವುದು ಪ್ರತಿಭಟನೆಯ ಹಾದಿ ಮಾತ್ರ. ಇತರ  ರೈತ  ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಹೋರಾಟವನ್ನು ಮುಂದುವರಿಸಲಾಗುವುದು’ ಎಂದು ಜಂಬಯ್ಯ ನಾಯಕ ತಿಳಿಸಿದರು.

‘ಈ  ಹಿಂದೆ ಹೊಸಪೇಟೆಯಲ್ಲಿ ಕಬ್ಬಿನ ಕಾರ್ಖಾನೆ ಇತ್ತು. 10 ವರ್ಷದ ಹಿಂದೆ ಅದು ಮುಚ್ಚಿಹೋಗಿದೆ. ಜಿಲ್ಲೆಯಲ್ಲಿ 5 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. ರೈತರಿಗೆ ಈಗ ಟನ್‌ ಕಬ್ಬಿಗೆ ₹3,100 ದರ ಸಿಕ್ಕಿದರೂ, ಸದ್ಯ ಸಾಗಣೆ ವೆಚ್ಚಕ್ಕಾಗಿಯೇ ಅವರು ₹1,700 ವ್ಯಯಿಸಬೇಕಾಗಿದೆ. ಹೊಸಪೇಟೆಯಲ್ಲಿ ಕಬ್ಬಿನ ಕಾರ್ಖಾನೆ ಆದರೆ ಮಾತ್ರ ರೈತರಿಗೆ ಪ್ರಯೋಜನ. ಕಾಳಘಟ್ಟದಲ್ಲಿ ಕಾರ್ಖಾನೆ ಸ್ಥಾಪಿಸಲಾಗುವುದು ಎಂದು ಶಾಸಕರು ಹೇಳುತ್ತಿದ್ದರೂ, ವಿಶ್ವ ಪಾರಂಪರಿಕ ತಾಣ ಹಂಪಿಯ ಬಫರ್ ವಲಯದಲ್ಲಿ ಸ್ಥಳ ಬರುವ ಕಾರಣ ಅಲ್ಲಿ  ನಿರ್ಮಾಣ ಮಾಡಲು ಅನುಮತಿ ಸಿಗುವುದು ಕಷ್ಟ. ಇದೆಲ್ಲವೂ ಗೊತ್ತಿದ್ದರೂ ಶಾಸಕರು, ಸಚಿವರು ಸ್ಥಳೀಯ ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ ಮಾಡಿದ್ದಾರೆ, ಮುಂದೆ ಇಂತಹ ಆಟ ನಡೆಯುವುದಿಲ್ಲ’ ಎಂದು ಅವರು ಎಚ್ಚರಿಸಿದರು.

ಸಂಘದ ಕಾರ್ಯದರ್ಶಿ ಜೆ.ಗಾದಿಲಿಂಗಪ್ಪ, ಸಹ ಕಾರ್ಯದರ್ಶಿ ಸಿ.ಅಂಜಿನಪ್ಪ, ಖಚಾಂಚಿ ಸಿ.ಹಾಶಾಂ, ಪ್ರಮುಖರಾದ ಆರ್.ಯಲ್ಲಪ್ಪ, ಕೆ.ವೆಂಕೋಬಣ್ಣ, ಉತ್ತಂಗಿ ಕೊಟ್ರೇಶ್‌, ಬಿ.ನಾಗರಾಜ್‌, ಜಾಕೀರ್ ಹುಸೇನ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.