ADVERTISEMENT

ವಿಜಯನಗರ | ಕಬ್ಬು ಬೆಲೆ ನಿಗದಿ: ರೈತರಿಗೆ ವಂಚಿಸಲು ನಡೆದಿತ್ತೇ ಯತ್ನ?

ಇಂದು ಡಿ.ಸಿ., ಶಾಸಕರ ನೇತೃತ್ವದಲ್ಲಿ ದರ ನಿಗದಿ ಸಭೆ

ಎಂ.ಜಿ.ಬಾಲಕೃಷ್ಣ
Published 3 ನವೆಂಬರ್ 2025, 6:44 IST
Last Updated 3 ನವೆಂಬರ್ 2025, 6:44 IST
<div class="paragraphs"><p>ಕಬ್ಬು </p></div>

ಕಬ್ಬು

   

ಹೊಸಪೇಟೆ (ವಿಜಯನಗರ): ಸಕ್ಕರೆ ಕಾರ್ಖಾನೆ ಹೊಸಪೇಟೆ ಸುತ್ತಮುತ್ತ ಇಲ್ಲದೆ ರೈತರು ತೀವ್ರ ಸಂಕಷ್ಟದಲ್ಲಿ ಇರುವ ಸಮಯದಲ್ಲೇ, ಇದೀಗ ಬೆಳೆದಿರುವ ಕಬ್ಬನ್ನು ಸ್ವಲ್ಪ ಕಡಿಮೆ ದರಕ್ಕೆ ಕಂಪನಿಗಳಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ವ್ಯವಸ್ಥಿತ ಪಿತೂರಿ ನಡೆದಿರುವ ಶಂಕೆ ಇದ್ದು, ಹೊಸಪೇಟೆ ರೈತಸಂಘದ ಸಮಯೋಚಿತ ಕ್ರಮದಿಂದ ರೈತರಿಗೆ ಭಾರಿ ನಷ್ಟವಾಗುವುದು ತಪ್ಪಿದೆ.

ರೈತರ ಕಷ್ಟಕ್ಕೆ ತಕ್ಷಣ ಸ್ಪಂದಿಸಿರುವ ಶಾಸಕ ಎಚ್.ಆರ್.ಗವಿಯಪ್ಪ ಅವರು ಸೋಮವಾರವೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಬ್ಬು ದರ ನಿಗದಿಪಡಿಸುವ ಸಭೆಯನ್ನು ಕರೆದಿದ್ದು, ಜಿಲ್ಲೆಯಲ್ಲಿರುವ ಒಂದು ಸಕ್ಕರೆ ಕಾರ್ಖಾನೆ ಸಹಿತ ಮೂರು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಟನ್‌ ಕಬ್ಬಿಗೆ ಕನಿಷ್ಠ 3,200 ದರ ನಿಗದಿಯಾಗಬೇಕು ಎಂದು ರೈತರು ಒತ್ತಾಯಿಸುತ್ತಿದ್ದು, ಎಷ್ಟು ದರ ನಿಗದಿಯಾಗಲಿದೆ ಎಂಬ ಕುತೂಹಲ ಮೂಡಿದೆ.

ADVERTISEMENT

ಪಿತೂರಿ ಯತ್ನ ತಡೆ: ಇದೀಗ ರಸಭರಿತ ಕಬ್ಬು ಕಟಾವು ಸಮಯವಾಗಿದ್ದು, ಶನಿವಾರ ಕಮಲಾಪುರ ಭಾಗದಲ್ಲಿ ರೈತರನ್ನು ಸಂಪರ್ಕಿಸಿದ್ದ ದುಗ್ಗಾವತಿಯ ಶಾಮನೂರು ಶುಗರ್ಸ್‌, ಮುಂಡರಗಿ ಮತ್ತು ಸಿರುಗುಪ್ಪದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ಟನ್‌ ಕಬ್ಬಿಗೆ ₹3,024, ₹3,054, ₹3,070 ದರದಲ್ಲಿ ಕಬ್ಬು ಖರೀದಿಸಲು ಮುಂದಾಗಿದ್ದರು ಎನ್ನಲಾಗಿದೆ. ಕೆಲವು ಕಬ್ಬು ತುಂಬಿದ ವಾಹನಗಳು ಸಕ್ಕರೆ ಕಾರ್ಖಾನೆಗಳತ್ತ ತೆರಳಿದ್ದವು ಕೂಡಾ. ಈ ವ್ಯವಹಾರ ಕುದುರುವುದಕ್ಕೆ ಸ್ಥಳೀಯ ಕೆಲವು ಪ್ರಭಾವಿಗಳ ಕುಮ್ಮಕ್ಕು ಇತ್ತು ಎಂದು ಹೇಳಲಾಗುತ್ತಿದೆ.

ವಿಷಯ ತಿಳಿದ ಹೊಸಪೇಟೆ ರೈತ ಸಂಘದ ಮುಖಂಡ ಕಟಗಿ ಜಂಬಯ್ಯ ನಾಯಕ, ಕಟಗಿ ರಾಮಕೃಷ್ಣ, ಆಶಂ, ಸಿದ್ದನಗೌಡ, ಓಬಯ್ಯ ಇತರರು ಕಮಲಾಪುರಕ್ಕೆ ಧಾವಿಸಿ ಧರಣಿ ನಡೆಸಿದ್ದರು ಹಾಗೂ ಕಬ್ಬು ತುಂಬಿದ್ದ ಲಾರಿಗಳನ್ನು ತಡೆಗಟ್ಟಿದ್ದರು. ಜಿಲ್ಲಾಡಳಿತದಿಂದ ಕಬ್ಬು ದರ ನಿಗದಿಯಾಗುವ ತನಕ ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡು ಕಬ್ಬು ಸಾಗಿಸುವಂತಿಲ್ಲ ಎಂದು ಪಟ್ಟು ಹಿಡಿದರು. ಸ್ಥಳದಿಂದಲೇ ಶಾಸಕ ಎಚ್‌.ಆರ್‌.ಗವಿಯಪ್ಪ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆ ಮನವರಿಕೆ ಮಾಡಿದರು. ಶಾಸಕರು ತಕ್ಷಣ ಜಿಲ್ಲಾಧಿಕಾರಿ ಅವರಿಗೆ ತಿಳಿಸಿ ಸೋಮವಾರವೇ ದರ ನಿಗದಿ ಸಭೆ ನಡೆಸಲು ಸೂಚಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಎಚ್‌.ಆರ್.ಗವಿಯಪ್ಪ

ಸಕ್ಕರೆ ಕಾರ್ಖಾನೆ ಆಗದೆ ಕಂಗೆಟ್ಟಿರುವ ರೈತರು ದರ ವಿಚಾರದಲ್ಲೂ ಶಾಸಕರಿಗೆ ಖೆಡ್ಡಾ ತೋಡುವ ಹುನ್ನಾರ ಶಂಕೆ ಟನ್‌ ಕಬ್ಬಿಗೆ ₹3,200 ದರ ನಿಗದಿ ನಿರೀಕ್ಷೆ

ಈ ಭಾಗದ ರೈತರು ಸಕ್ಕರೆ ಕಾರ್ಖಾನೆ ಇಲ್ಲದೆ ಮೊದಲೇ ಕಂಗಾಲಾಗಿದ್ದಾರೆ. ದರ ವಿಷಯದಲ್ಲಿ ಅವರಿಗೆ ಅನ್ಯಾಯ ಆಗುವುದನ್ನು ಸಹಿಸಲಾರೆ ಡಿ.ಸಿ ಜತೆಗೆ ಸೋಮವಾರ ಸಭೆ ನಡೆಸಿ ಕಬ್ಬಿನ ದರ ನಿಗದಿಪಡಿಸಲಾಗುವುದು
ಎಚ್‌.ಆರ್.ಗವಿಯಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.