ADVERTISEMENT

ಕಬ್ಬು ದರ ನಿಗದಿಗೆ ಆಗ್ರಹ: ಮೈಲಾರ ಶುಗರ್ಸ್‌ ಬಂದ್ ಮಾಡಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:59 IST
Last Updated 8 ನವೆಂಬರ್ 2025, 4:59 IST
ಹೂವಿನಹಡಗಲಿ ತಾಲ್ಲೂಕಿನ ಬೀರಬ್ಬಿಯ ಮೈಲಾರ ಶುಗರ್ಸ್‌ ಕಾರ್ಖಾನೆ ಸಮೀಪ ಶುಕ್ರವಾರ ರೈತರು ನಡೆಸಿದ ಪ್ರತಿಭಟನೆ ವೇಳೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್‌ ಮಾತನಾಡಿದರು  –ಪ್ರಜಾವಾಣಿ ಚಿತ್ರ
ಹೂವಿನಹಡಗಲಿ ತಾಲ್ಲೂಕಿನ ಬೀರಬ್ಬಿಯ ಮೈಲಾರ ಶುಗರ್ಸ್‌ ಕಾರ್ಖಾನೆ ಸಮೀಪ ಶುಕ್ರವಾರ ರೈತರು ನಡೆಸಿದ ಪ್ರತಿಭಟನೆ ವೇಳೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್‌ ಮಾತನಾಡಿದರು  –ಪ್ರಜಾವಾಣಿ ಚಿತ್ರ   

ಹೂವಿನಹಡಗಲಿ: ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಲು ಆಗ್ರಹಿಸಿ ರೈತರು ತಾಲ್ಲೂಕಿನ ಬೀರಬ್ಬಿಯ ಮೈಲಾರ ಶುಗರ್ಸ್ ಕಾರ್ಖಾನೆಯನ್ನು ಶುಕ್ರವಾರ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ಸಕ್ಕರೆ ಕಾರ್ಖಾನೆಗಳು ಕಟಾವು, ಸಾಗಣೆಗೆ ಹೆಚ್ಚುವರಿ ಹಣ ವಸೂಲಿ ಮಾಡಬಾರದು ಎಂಬ ಬೇಡಿಕೆಯನ್ನೂ ಮುಂದಿಟ್ಟು ಕಬ್ಬು ಬೆಳೆಗಾರರು ಹಾಗೂ ವಿವಿಧ ರೈತ ಸಂಘಟನೆಗಳು ಈ ಪ್ರತಿಭಟನೆ ನಡೆಸಿದವು.

ಬೆಳಿಗ್ಗೆ ರೈತರು ಕಾರ್ಖಾನೆಯ ಪ್ರವೇಶ ದ್ವಾರ ಬಂದ್ ಮಾಡಿ ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡದೇ ಪಕ್ಕದ ಜಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಎಂದು ತಿಳಿಸಿದರು.

ADVERTISEMENT

‘ನೀವು ಕಾರ್ಖಾನೆಯನ್ನು ಬಂದ್ ಮಾಡಿಸಿದರೆ ಮಾತ್ರ ಪಕ್ಕದ ಜಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ರೈತರು ಹೇಳಿದರು. ಅದರಂತೆ  ಸ್ಥಳದಲ್ಲಿದ್ದ ತಹಶೀಲ್ದಾರ್ ಜಿ.ಸಂತೋಷಕುಮಾರ್ ಅವರು ಕಾರ್ಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಿಂದ ಮಧ್ಯಾಹ್ನದ ನಂತರ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಲಾಯಿತು.

ಮುಖ್ಯಮಂತ್ರಿ ಅವರು ಕರೆದಿರುವ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯ ತೀರ್ಮಾನ ನೋಡಿಕೊಂಡು ಪ್ರತಿಭಟನೆಯ ಸ್ವರೂಪ ನಿರ್ಧರಿಸುತ್ತೇವೆ ಎಂದು ಮುಖಂಡರು ಹೇಳಿದರು.