ADVERTISEMENT

ಟಿ.ಪಿ. ಕೈಲಾಸಂ ಪ್ರಶಸ್ತಿಗೆ ರಂಗಭೂಮಿ ಕಲಾವಿದ ರವಿ ಕುಲಕರ್ಣಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 7:52 IST
Last Updated 28 ಜುಲೈ 2022, 7:52 IST
ರವಿ ಕುಲಕರ್ಣಿ
ರವಿ ಕುಲಕರ್ಣಿ   

ಹೊಸಪೇಟೆ (ವಿಜಯನಗರ): ನಗರದ ಕನ್ನಡ ಕಲಾ ಸಂಘದ 2022ನೇ ಸಾಲಿನ ಟಿ.ಪಿ. ಕೈಲಾಸಂ ಪ್ರಶಸ್ತಿಗೆ ಧಾರವಾಡದ ರಂಗಭೂಮಿ ಕಲಾವಿದ ರವಿ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ.

‘ನಟ, ನಿರ್ದೇಶಕ, ನಾಟಕಕಾರ, ಬೆಳಕು ವಿನ್ಯಾಸಕಾರ, ಸಂಘಟಕರಾಗಿ ಹಲವು ವರ್ಷಗಳಿಂದ ರವಿ ಕುಲಕರ್ಣಿ ಅವರು ರಂಗಭೂಮಿಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶನಿವಾರ (ಜು.30) ಸಂಜೆ 6.30ಕ್ಕೆ ನಗರದ ಪಂಪಾ ಕಲಾ ಮಂದಿರದಲ್ಲಿ ಹಮ್ಮಿಕೊಂಡಿರುವ ಟಿ.ಪಿ. ಕೈಲಾಸಂ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ, ₹5 ಸಾವಿರ ನಗದು, ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ’ ಎಂದು ಸಂಘದ ಕಾರ್ಯದರ್ಶಿ ಎಸ್‌.ಎಸ್‌. ಚಂದ್ರಶೇಖರ್‌ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌, ಸೂಪರಿಟೆಂಡೆಂಟ್‌ ಎಂಜಿನಿಯರ್‌ ಆರ್‌. ಶ್ರೀಕಾಂತ ರೆಡ್ಡಿ, ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ.ಟಿ. ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಸಂಘದ ಆಜೀವ ಸದಸ್ಯ ನರೇಂದ್ರ ಬಾಬು ಪಾಲ್ಗೊಳ್ಳುವರು ಎಂದು ವಿವರಿಸಿದರು.

ADVERTISEMENT

ಶ್ರೀನಿವಾಸ ಜಿ. ಜೋಷಿ ನಿರ್ದೇಶನದ ‘ಬುದ್ಧಿವಂತ ರಾಮಕೃಷ್ಣ’ ಕಿರುನಾಟಕವನ್ನು ನಗರದ ಮಾರ್ಕಂಡೇಶ್ವರ ಪ್ರೌಢಶಾಲೆಯ ಮಕ್ಕಳು ನಡೆಸಿಕೊಡುವರು. ಕನ್ನಡ ಕಲಾ ಸಂಘವು ಸತತ 58 ವರ್ಷಗಳಿಂದ ಟಿ.ಪಿ. ಕೈಲಾಸಂ ಅವರ ಜನ್ಮ ದಿನ ಆಚರಿಸಿಕೊಂಡು ಬರುತ್ತಿದೆ. ಮಕ್ಕಳ ನಾಟಕ ಸೇರಿದಂತೆ ರಂಗಭೂಮಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. 2021–22ನೇ ಸಾಲಿನ ಕರ್ನಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಹೇಳಿದರು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಂಗಭೂಮಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿರಂತರವಾಗಿ ರಂಗ ಚಟುವಟಿಕೆಗಳು ನಡೆಯುತ್ತಿರುತ್ತವೆ. ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ರಂಗಮಂದಿರದ ಅಗತ್ಯವಿದ್ದು, ಅದರ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಇಷ್ಟರಲ್ಲೇ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಸಂಘದ ಆಜೀವ ಸದಸ್ಯರಾದ ರಾಜು ಕುಲಕರ್ಣಿ, ರಾಜಗೋಪಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.