ADVERTISEMENT

ತ್ಯಾಜ್ಯ ವಿಲೇವಾರಿ ಘಟಕದ ಯಂತ್ರ ಕಳವು; ₹5 ಲಕ್ಷ ವಸ್ತುಗಳೊಂದಿಗೆ ಮೂವರ ಬಂಧನ

ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಯಂತ್ರ ಕಳವು

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 10:33 IST
Last Updated 19 ಜನವರಿ 2022, 10:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ₹4 ಲಕ್ಷ ಮೌಲ್ಯದ ಶ್ರೆಡರ್‌ ಯಂತ್ರ ಸೇರಿದಂತೆ ಒಟ್ಟು ₹5 ಲಕ್ಷದ ವಸ್ತುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಾರಿಗನೂರಿನ ಹಂಪಿನಕಟ್ಟೆ ನಿವಾಸಿ ರಮೇಶ ಹನುಮಂತಪ್ಪ (26), ಕಂಚಗಾರಪೇಟೆಯ ಶಿವನಾಯ್ಕ ರಾಮನಾಯ್ಕ (36) ಹಾಗೂ ಕಾರಿಗನೂರಿನ ಊರಮ್ಮ ದೇವಸ್ಥಾನದ ಎಂ. ಮರಿಸ್ವಾಮಿ ಜಂಬಣ್ಣ (34) ಬಂಧಿತರು. ₹4 ಲಕ್ಷದ ಶ್ರೆಡರ್‌ ಯಂತ್ರ, ₹1 ಲಕ್ಷದ ಟಾಟಾ ಏಸ್‌ ವಾಹನ, ₹5,000 ಬೆಲೆಬಾಳುವ ಗ್ಯಾಸ್‌ ಕಟಿಂಗ್‌ ಮಶೀನ್‌, ₹1,500 ಬೆಲೆಯ ಗ್ಯಾಸ್‌ ಸಿಲಿಂಡರ್‌, ₹2,000 ಮೌಲ್ಯದ ಆಕ್ಸಿಜನ್‌ ಸಿಲಿಂಡರ್‌ ವಶಪಡಿಸಿಕೊಂಡಿದ್ದಾರೆ.

‘ಕಾರಿಗನೂರಿನಲ್ಲಿ ನಗರಸಭೆಗೆ ಸೇರಿದ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಶ್ರೆಡರ್‌ ಮಶೀನ್‌ ಕಳುವಾಗಿತ್ತು. ಈ ಕುರಿತು ನಗರಸಭೆ ಪರಿಸರ ಎಂಜಿನಿಯರ್‌ ಆರತಿ ಗ್ರಾಮೀಣ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ಕೊಟ್ಟಿದ್ದರು. ದೂರು ಆಧರಿಸಿ ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಮೇಟಿ ನೇತೃತ್ವದಲ್ಲಿ ಎಎಸ್‌ಐ ಶಾಷಾವಲಿ, ಕಾನ್‌ಸ್ಟೆಬಲ್‌ಗಳಾದ ಬಿ. ರಾಘವೇಂದ್ರ, ಕೊಟ್ರೇಶ ಏಳಂಜಿ, ಪ್ರಕಾಶ್‌ ಕೆ., ರಮೇಶ ಓ., ಬಿ. ನಾಗರಾಜ, ಕೆ. ಸುಭಾಷ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸೆಕ್ಯುರಿಟಿ ಆಗಿ ಕೆಲಸ ನಿರ್ವಹಿಸುತ್ತಿದ್ದ ರಮೇಶ ಹಾಗೂ ಇತರೆ ಇಬ್ಬರನ್ನು ಬಂಧಿಸಿ, ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ಬುಧವಾರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.