
ಅಕ್ಷಯ್ ಕುಮಾರ್
ಕೊಟ್ಟೂರು (ವಿಜಯನಗರ ಜಿಲ್ಲೆ): ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಕುಟುಂಬದ ಮೂವರು ನಾಪತ್ತೆಯಾದ ಪ್ರಕರಣ ಶನಿವಾರ ಬೆಳಿಗ್ಗೆಯೂ ನಿಗೂಢವಾಗಿಯೇ ಉಳಿದಿದ್ದು, ದೂರು ನೀಡಿರುವ ಅಕ್ಷಯ್ ಕುಮಾರ್‌ನ ಬರವಿಕೆಗಾಗಿ ಪಟ್ಟಣ ಕಾದು ಕುಳಿತಿದೆ.
‘ನನ್ನ ತಂದೆ ಭೀಮರಾಜ್ (48), ತಾಯಿ ಜಯಮ್ಮ (44), ತಂಗಿ ಅಮೃತಾ (18) ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋದವರು ನಾಪತ್ತೆಯಾಗಿದ್ದಾರೆ’ ಎಂದು ಟೈರ್ ರಿಪೇರಿ ಕೆಲಸ ಮಾಡುವ ಅಕ್ಷಯ ಕುಮಾರ್ (24) ದೂರಿನಲ್ಲಿ ತಿಳಿಸಿದ್ದ. ಆದರೆ ಬೆಂಗಳೂರಿನ ತಿಲಕನಗರ ಠಾಣೆ ಪೊಲೀಸರಿಗೆ ಆತನ ದೂರು, ಹೇಳಿಕೆಗಳ ಬಗ್ಗೆ ಸಂಶಯ ಮೂಡಿದ ಕಾರಣ ಆತನನ್ನು ವಶಕ್ಕೆ ಪಡೆದು ಕೊಟ್ಟೂರಿನತ್ತ ಕಳುಹಿಸುವ ಪ್ರಕ್ರಿಯೆ ನಡೆಸಿದ್ದಾರೆ. ಶನಿವಾರ ಮಧ್ಯಾಹ್ನದೊಳಗೆ ಆತನನ್ನು ಇಲ್ಲಿಗೆ ಕರೆತರುವ ನಿರೀಕ್ಷೆ ಇದೆ.
‘ಮನೆಯಲ್ಲಿ ನಾವು ಯಾರೂ ಹುಡುಕಾಟ ನಡೆಸಿಲ್ಲ. ಮನೆಯಲ್ಲಿ ಒಂದೆಡೆ ಮಣ್ಣು ಅಗೆದು ಹಾಕಿದ ಚಿತ್ರಣ ನಮಗೆ ಕಾಣಿಸಿತ್ತು. ಇದು ನಾವು ಅಗೆದು ಹುಡುಕಿದ್ದಲ್ಲ. ಯುವಕ ಬಂದು, ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದ ನಂತರವಷ್ಟೇ ನಿಗೂಢತೆಗೆ ಉತ್ತರ ಸಿಗಬಹುದಷ್ಟೇ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ದೊಡ್ಡಕಿಟ್ಟದಾಳ ಗ್ರಾಮದ ಅಕ್ಷಯ ಕುಮಾರ್ ಜಗಳೂರಿನಲ್ಲಿ ಟೈರ್ ರಿಪೇರಿ ಕೆಲಸ ಮಾಡುತ್ತಿದ್ದ. ಒಂದೂವರೆ ವರ್ಷದ ಹಿಂದೆ ಕೊಟ್ಟೂರಿಗೆ ಬಂದು ಹರಪನಹಳ್ಳಿ ರಸ್ತೆಯಲ್ಲಿ ಟೈರ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ.
ನಿಷೇಧ: ಅಕ್ಷಯ್ ಕುಮಾರ್ ಕುಟುಂಬ ವಾಸವಿದ್ದ ಮನೆಯ ಸುತ್ತಮುತ್ತ ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಮನೆಯ ಸುತ್ತಲೂ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಮಾಹಿತಿ ಲಭಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.