
ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಾರ್ಷಿಕ ₹200 ಕೋಟಿ ಮೀಸಲಿಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಅದು ಜಾರಿಗೆ ಬಂದಿಲ್ಲ. ಈ ಬಜೆಟ್‌ನಲ್ಲಿ ಅದನ್ನು ಒದಗಿಸಲೇಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿಯ ಜಿಲ್ಲಾ ಸಹ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ, ಅದಕ್ಕೆ ಸ್ಪಂದನ ಸಿಕ್ಕಿಲ್ಲ. ಈ ಬಾರಿಯಾದರೂ ಸರ್ಕಾರ ತನ್ನ ಮಾತು ಉಳಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖ ಹಕ್ಕೊತ್ತಾಯ: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಬೇಕು, ಸರ್ವತೋಮುಖ ಅಭಿವೃದ್ಧಿಗೆ ₹250 ಕೋಟಿಯ ಪ್ರತ್ಯೇಕ ಬಜೆಟ್ ನೀಡಬೇಕು, ವಸತಿ, ಹಾಸ್ಟೆಲ್ ಮತ್ತು ಶಾರ್ಟ್ ಸ್ಟೇ ಹೋಮ್‌ಗಳನ್ನು ಒದಗಿಸಬೇಕು, ಪ್ರತಿ ವರ್ಷ ಕನಿಷ್ಠ 500 ಮನೆ ಹಂಚಿಕೆ ಮಾಡಬೇಕು ಎಂದು ಅವರು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆ ನಡೆಸಬೇಕು, ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 6 ತಿಂಗಳು ₹5,000 ಪುನರ್ವಸತಿ ನೆರವು ನೀಡಬೇಕು, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 1 ವಿಶೇಷ ಆರೋಗ್ಯ ಕೇಂದ್ರ ತೆರೆಯಬೇಕು, ಮೈತ್ರಿ ಪಿಂಚಣಿಯನ್ನು ₹1,200ರಿಂದ ₹2,000ಕ್ಕೆ ಹೆಚ್ಚಿಸಬೇಕು, ವೃದ್ಧಾಪ್ಯ ಪಿಂಚಣಿ ರೂಪದಲ್ಲಿ ₹5,000 ನೀಡಬೇಕು, ಕೃಷಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗೆ 2 ಎಕರೆ ಗೋಮಾಳ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡಬೇಕು, ಉದ್ಯಮಶೀಲತೆಗೆ ಬ್ಯಾಂಕ್ ಲಿಂಕ್ ಆಧಾರಿತ ಯೋಜನೆ ಜಾರಿಗೆ ತಂದು ವ್ಯಕ್ತಿಗೆ ₹2 ಲಕ್ಷ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.
ಮಹೇಶ್ ಪಾಟೀಲ, ಫಾತಿಮಾ, ಶೆಹನಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.