ADVERTISEMENT

ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ರಾಜ್ಯ ಸರ್ಕಾರಕ್ಕೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯಿಂದಲೇ ಪತ್ರ

ಎಂ.ಜಿ.ಬಾಲಕೃಷ್ಣ
Published 27 ಜನವರಿ 2026, 23:04 IST
Last Updated 27 ಜನವರಿ 2026, 23:04 IST
ಕನ್ಹಯ್ಯ ನಾಯ್ಡು 
ಕನ್ಹಯ್ಯ ನಾಯ್ಡು    

ಹೊಸಪೇಟೆ (ವಿಜಯನಗರ): ‘ಅಣೆಕಟ್ಟೆ ಕ್ರೆಸ್ಟ್‌ಗೇಟ್‌ ಬದಲಾವಣೆಗೆ ನಿಯೋಜಿಸಿರುವ ಸಿಬ್ಬಂದಿ ಸಂಬಳ, ಸಾರಿಗೆ, ಇತರೆ ವೆಚ್ಚಗಳಿಗೆ ಆಂಧ್ರಪ್ರದೇಶ ಸರ್ಕಾರ ಬಿಡುಗಡೆ ಮಾಡಿದ್ದ ₹35.62 ಕೋಟಿಯಲ್ಲಿ ₹10 ಕೋಟಿಯನ್ನು ಕರ್ನಾಟಕ ಸರ್ಕಾರ ಹಿಡಿದಿಟ್ಟುಕೊಂಡಿದೆ’ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ ಅವರೇ ಬೊಟ್ಟುಮಾಡಿ ತೋರಿಸಿದ್ದಾರೆ.

ಕಾರ್ಯದರ್ಶಿ ರೆಡ್ಡಿ ಅವರು ಈ ಸಂಬಂಧ ಕರ್ನಾಟಕದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದು, ಅದು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಈ ಪತ್ರವನ್ನು ಅವರು ಮಂಡಳಿಯ ಅಧ್ಯಕ್ಷರಿಗೂ ರವಾನಿಸಿದ್ದಾರೆ.

ಕರ್ನಾಟಕ ಸರ್ಕಾರ ₹10 ಕೋಟಿ ವಾಪಸು ಪಡೆದಿದೆ ಎಂದು ಜ.22ರಂದು ಗೇಟ್ ತಜ್ಞ ಕನ್ಹಯ್ಯ ನಾಯ್ಡು ಹೇಳಿದ್ದರು. ವಾಪಸ್ ಪಡೆದಿಲ್ಲ ಎಂದು ರಾಜ್ಯ ಸಚಿವರು ಹೇಳಿದ್ದರು. ಆದರೆ ಮಂಡಳಿ ಕಾರ್ಯದರ್ಶಿ ಅವರ ಪತ್ರವನ್ನೇ ಕನ್ಹಯ್ಯನಾಯ್ಡು ಆರೋಪಕ್ಕೆ ಸಾಕ್ಷಿಯಾಗಿ ಹೊಂದಿದ್ದಾರೆ.

ADVERTISEMENT

‘ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಿಮ್ಮ ಸಚಿವರು ಹೇಳುತ್ತಾರೆ. ಮಂಡಳಿ ಕಾರ್ಯದರ್ಶಿ ಅವರೇ ಪತ್ರ ಬರೆದಿದ್ದಾರೆ. ಈಗ ಏನು ಹೇಳುತ್ತಾರೆ’ ಎಂದು ಕನ್ಹಯ್ಯ ನಾಯ್ಡು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ಪತ್ರದಲ್ಲಿ ಏನಿದೆ?: ತುಂಗಭದ್ರಾ ಅಣೆಕಟ್ಟೆ, ಬಲದಂಡೆ ಕಾಲುವೆಗಳ ನಿರ್ವಹಣೆ ಸಹಿತ ಇತರ ವೆಚ್ಚಗಳಿಗೆ ಆಂಧ್ರಪ್ರದೇಶ ಸರ್ಕಾರ ವಾರ್ಷಿಕ ₹390.66 ಕೋಟಿ ನೀಡುತ್ತದೆ. ಈ ಬಾರಿ ಕ್ರೆಸ್ಟ್‌ಗೇಟ್‌ಗಳ ಬದಲಾವಣೆಗಾಗಿ ಸಾಮಗ್ರಿಗಳ ಖರೀದಿಗಾಗಿ 2025ರ ನವೆಂಬರ್‌ 26ರಂದು ಆಂಧ್ರ ಸರ್ಕಾರ ₹20 ಕೋಟಿಯನ್ನು, ರಾಜ್ಯ ಕರ್ನಾಟಕದ ಉಸ್ತುವಾರಿಯಲ್ಲಿರುವ ತುಂಗಭದ್ರಾ ಮಂಡಳಿ ಖಾತೆಗೆ ವರ್ಗಾಯಿಸಿತ್ತು.  ಆಗ ಕರ್ನಾಟಕವೂ ಖಾತೆಗೆ ₹10 ಕೋಟಿ ವರ್ಗಾಯಿಸಿತ್ತು. ಸಿಬ್ಬಂದಿ ಸಂಬಳ, ಸಾರಿಗೆ ಇತರೆ ವೆಚ್ಚಗಳಿಗೆ ಆಂಧ್ರ ಸರ್ಕಾರ ಹೆಚ್ಚುವರಿಯಾಗಿ ₹35.62 ಕೋಟಿಯನ್ನು ಡಿ.17ರಂದು ನೀಡಿತ್ತು. ಆದರೆ, ಈ ಸಂಬಳ ಸಂಬಂಧಿತ ದುಡ್ಡನ್ನು ತುಂಗಭದ್ರಾ ಮಂಡಳಿಯ ಖಾತೆಗೆ ಹಾಕುವಾಗ ಕೇವಲ ₹25.62 ಕೋಟಿ ಮಾತ್ರ ಹಾಕಲು ಕರ್ನಾಟಕ ಸರ್ಕಾರ ತನ್ನ ಖಜಾನೆ ಇಲಾಖೆಗೆ ಸೂಚಿಸಿದೆ. ಸಮರ್ಪಕವಾಗಿ ಕೆಲಸ ಮುಂದುವರಿಸಲು ಈ ದುಡ್ಡನ್ನು ತಕ್ಷಣ ನೀಡಿ’ ಎಂಬ ಉಲ್ಲೇಖ ಕಾರ್ಯದರ್ಶಿ ಅವರು ಬರೆದ ಪತ್ರದಲ್ಲಿ ಇದೆ.

ಈ ಮಧ್ಯೆ, ಉಭಯ ಜಿಲ್ಲೆಗಳ ರೈತ ಮುಖಂಡರು ಮಂಗಳವಾರ ಮಂಡಳಿಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು. ‘ಹಣ ಬಿಡುಗಡೆಗೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಕಾರ್ಯದರ್ಶಿ ಹೇಳಿದರು’ ಎಂದು ಮುಖಂಡ ಜೆ.ಎನ್.ಕಾಳಿದಾಸ ತಿಳಿಸಿದರು. 

ಮೊದಲು ಆಂಧ್ರದಿಂದ ದುಡ್ಡು ಬಳಿಕ ಹಂಚಿಕೆ

ತುಂಗಭದ್ರಾ ಅಣೆಕಟ್ಟೆಯ ನಿರ್ವಹಣೆ ಕುರಿತಂತೆ ಈಗಾಗಲೇ ಆಗಿರುವ ಒಪ್ಪಂದದಂತೆ ಅಣೆಕಟ್ಟೆಗೆ ಸಂಬಂಧಿಸಿದಂತೆ ಎಲ್ಲಾ ವೆಚ್ಚವನ್ನೂ ಮೊದಲು ಆಂಧ್ರಪ್ರದೇಶ ಸರ್ಕಾರವೇ ಭರಿಸಬೇಕು. ಬಳಿಕ ತುಂಗಭದ್ರಾ ಮಂಡಳಿಯ ನಿಯಂತ್ರಣ ಹೊಂದಿರುವ ಕೇಂದ್ರೀಯ ಜಲ ಆಯೋಗ ವೆಚ್ಚವನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡುತ್ತದೆ. ಅದರಂತೆ ಆಂಧ್ರ ಸರ್ಕಾರ ಈಗಾಗಲೇ ₹55.62 ಕೋಟಿ ಕೊಟ್ಟುಬಿಟ್ಟಿದೆ.

ಅಧಿಕಾರಿಗಳಿಗೆ ನೇರವಾಗಿ ಹೇಳಲು ಆಗುತ್ತಿಲ್ಲ ಹೀಗಾಗಿ ನಾನೇ ಹೇಳಬೇಕಾಯಿತು. ನನ್ನ ಮೇಲೆ ಆರೋಪ ಮಾಡುವುದರ ಬದಲಿಗೆ ಕರ್ನಾಟಕ ಸರ್ಕಾರ ತನ್ನ ಹೊಣೆಗಾರಿಕೆಯ ದುಡ್ಡನ್ನು ನೀಡಲಿ
– ಕನ್ಹಯ್ಯ ನಾಯ್ಡು, ಗೇಟ್ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.