ಬಿಜೆಪಿ ಟೀಕೆ
(ಚಿತ್ರ ಕೃಪೆ: X/@BJP4Karnataka)
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರೆಸ್ಟ್‌ಗೇಟ್‌ಗಳೂ ಶಿಥಿಲಗೊಂಡಿವೆ, ಎಲ್ಲವನ್ನೂ ಬದಲಿಸಬೇಕು ಎಂಬ ತಜ್ಞರ ವರದಿಯನ್ನು ಕಡೆಗಣಿಸಿ ಗೇಟ್ ಬದಲಿಸದೆ ಕುಳಿತ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸಿದ್ದು, ಗೇಟ್‌ಗಳ ಮೇಲೆ ಸಿಎಂ, ಡಿಸಿಎಂ ನಿದ್ದೆ ಮಾಡುತ್ತಿರುವಂತಹ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ.
ತಜ್ಞರ ವರದಿಯನ್ನು ಕಸದ ಬುಟ್ಟಿಗೆ ಎಸೆದ ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿಯೇ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಭಾರಿ ಪ್ರಮಾಣದಲ್ಲಿ ನೀರು ಇದೀಗ ಆಂಧ್ರದ ಪಾಲಾಗುತ್ತಿದೆ, ಅದನ್ನು ತಡೆಗಟ್ಟಲು ಕ್ರಮವಹಿಸಿ ಲಕ್ಷಾಂತರ ರೈತರಿಗೆ ನೀರಿನ ಭರವಸೆ ಕೊಡಿ ಎಂದು ಅದರಲ್ಲಿ ತಿಳಿಸಲಾಗಿದೆ.
ಈಗಾಗಲೇ ತಿಳಿದಿರುವಂತೆ ಕಳೆದ ವರ್ಷದ ಆಗಸ್ಟ್ 10ರಂದು ರಾತ್ರಿ ಅಣೆಕಟ್ಟೆ ಗರಿಷ್ಠ ಮಟ್ಟ ತಲುಪಿದ್ದಾಗ 19ನೆ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಬಳಿಕ ವಾರದಲ್ಲೇ ತಾತ್ಕಾಲಿಕ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆಯಲಾಗಿತ್ತು. ಆದರೆ ಬಳಿಕ ತಜ್ಞರು ಅಣೆಕಟ್ಟೆಯ ಕೂಲಂಕಷ ಪರೀಕ್ಷೆ ನಡೆಸಿ, 19ನೇ ಗೇಟ್ ಮಾತ್ರವಲ್ಲ, ಇತರ ಎಲ್ಲ 32 ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸಬೇಕು ಎಂದು ತಿಳಿಸಿದ್ದರು. ಆದರೆ ವಿನ್ಯಾಸ ಅಂತಿಮಗೊಳಿಸುವುದು, ಟೆಂಡರ್ ಪ್ರಕ್ರಿಯೆ ವಿಳಂಬವಾಗಿ ಮತ್ತೆ ಮಳೆಗಾಲ ಆರಂಭವಾದರೂ ಗೇಟ್ ಬದಲಾವಣೆ ಸಾಧ್ಯವಾಗಲಿಲ್ಲ.
ಗೇಟ್‌ಗಳಿಗೆ ಹೆಚ್ಚು ಧಾರಣ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಈ ಬಾರಿ ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು (ಗರಿಷ್ಠ 105.78 ಟಿಎಂಸಿ ಅಡಿ) ಮಾತ್ರ ನೀರು ಸಂಗ್ರಹಿಸಲು ನಿರ್ಧರಿಸಲಾಗಿದೆ. ಭಾರಿ ಮಳೆಯಿಂದ ಈ ಬಾರಿ ನದಿಯಲ್ಲಿ ಅಪಾರ ಒಳಹರಿವು ಇದ್ದರೂ, ಅಣೆಕಟ್ಟೆಯಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಉತ್ತಮ ಮಳೆಯಾದರೂ ರೈತರಿಗೆ ಎರಡನೇ ಬೆಳೆಗೆ ನೀರು ಸಿಗುವುದು ಸಂಶಯದಿಂದ ಕೂಡಿದೆ. ಮತ್ತೊಂದೆಡೆ ಸ್ವಾತಂತ್ರ್ಯೋತ್ಸವ ದಿನದಂದು ಕೊಪ್ಪಳದಲ್ಲಿ ಸಚವ ಶಿವರಾಜ್ ತಂಗಡಗಿ ಅವರು ಅಣೆಕಟ್ಟೆಯ ಆರು ಗೇಟ್‌ಗಳು ಬಾಗಿದ ಕಾರಣ ಅವುಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುತ್ತಿಲ್ಲ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದರು. ಅದಕ್ಕಾಗಿಯೇ ಬಿಜೆಪಿ ಈ ರೀತಿಯಲ್ಲಿ ವ್ಯಂಗ್ಯಭರಿತ ಪೋಸ್ಟ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.