
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದ ಪಾದಯಾತ್ರೆ ಭಾನುವಾರ ಆಗಮಿಸಿತು
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಎರಡನೇ ಬೆಳೆ ಬೆಳೆಯಲು ನೀರು ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ಜಲಾಶಯದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಭಾನುವಾರ ತಾಲ್ಲೂಕಿನ ಕಮಲಾಪುರ ಪಟ್ಟಣಕ್ಕೆ ಆಗಮಿಸಿತು.
ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿದ ಪದಾಧಿಕಾರಿಗಳು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಸಂಘದ ಅಧ್ಯಕ್ಷ ಆರ್. ಮಾಧವರೆಡ್ಡಿ ಮಾತನಾಡಿ, ‘ಸೋಮವಾರ ಜಲಾಶಯದ ಬಳಿಯ ತುಂಗಭದ್ರಾ ಮಂಡಳಿಯ ಕಚೇರಿ ತಲುಪಿ, ಪ್ರತಿಭಟನೆ ಮಾಡಲಾಗುತ್ತದೆ’ ಎಂದರು.
‘ಈಗಾಗಲೇ ಎಚ್‍ಎಲ್‍ಸಿ ಕಾಲುವೆಗೆ ನೀರು ಹರಿಸಲಾಗಿದೆ. ಆದರೆ, ರಾಯಚೂರು ಹಾಗೂ ಎಲ್‍ಎಫ್‍ಸಿಯ ಎರಡು ಕಾಲುವೆಗೆ ನೀರು ಹರಿಸುತ್ತಿಲ್ಲ. ಜಲಾಶಯದಲ್ಲಿ 80 ಟಿಎಂಸಿ ಅಡಿ ನೀರು ಇದ್ದರೂ, ನಾಟಕ ಆಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಈವರೆಗೆ ಕೇವಲ 16 ಗೇಟ್‌ಗಳನ್ನು ಅಳವಡಿಸಿದ್ದು, ಇನ್ನೂ 19 ಗೇಟ್‍ಗಳನ್ನು ಯಾವಾಗ ಅಳವಡಿಸುತ್ತಾರೆಂಬುದು ಸ್ಪಷ್ಟವಿಲ್ಲ. ಎರಡನೇ ಬೆಳೆಗೆ ಜನವರಿವರೆಗೆ ನೀರು ಬೇಕಿದೆ. ಅದಕ್ಕಾಗಿ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.
ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಜಿ. ಪಂಪನಗೌಡ, ಅಸುಂಡೆ ಬಸವರಾಜ ಸ್ವಾಮಿ, ಪ್ರಭಾಕರ ರೆಡ್ಡಿ, ಹುಲುಗಪ್ಪ ಚಾಗನೂರು, ಜಾನೂರು ಪಂಪನಗೌಡ, ಚಾನಾಳು ವಿರುಪಾಕ್ಷಿ, ಗಣೇಶ್, ಹುಲುಗಪ್ಪ, ಕರಿಯಪ್ಪ ಗುಡಿಮನೆ, ರತ್ಮಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.