ADVERTISEMENT

ತುಂಗಭದ್ರಾ ಒಳಹರಿವಿನಲ್ಲಿ ಹೆಚ್ಚಳ: ನದಿಗೆ ದೊಡ್ಡ ಪ್ರಮಾಣದಲ್ಲಿ ನೀರು–ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:18 IST
Last Updated 26 ಜುಲೈ 2025, 6:18 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ನದಿಯ ಒಳಹರಿವಿನಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಕಾರಣ ಅಣೆಕಟ್ಟೆಯಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುವುದು, ನದಿಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ತುಂಗಭದ್ರಾ ಮಂಡಳಿ ಶನಿವಾರ ತುರ್ತು ಪ್ರಕಟಣೆ ಹೊರಡಿಸಿದೆ.

ತುಂಗಭದ್ರಾ ಅಣೆಕಟ್ಟೆಯಿಂದ 24 ದಿನಗಳಿಂದೀಚೆಗೆ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಯುತ್ತಲೇ ಇದೆ. ಜುಲೈ ಮೊದಲೆರಡು ವಾರ ಒಳಹರಿವು ಪ್ರಮಾಣ 40 ಸಾವಿರ ಕ್ಯೂಸೆಕ್‌ಗಿಂತ ಅಧಿಕ ಇತ್ತು, ಜುಲೈ 5ರಂದು 64 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿತ್ತು. ಬಳಿಕ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗುತ್ತ ಬಂದ ಕಾರಣ ಹೊರಹರಿವಿನ ಪ್ರಮಾಣವನ್ನೂ ಇಳಿಸಲಾಗಿತ್ತು.

ಇದೀಗ ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದ್ದು, ಇದರಿಂದ ಅವು ಬಂದು ಸೇರುವ ತುಂಗಭದ್ರಾ ನದಿಯಲ್ಲೂ ಒಳಹರಿವಿನ ಪ್ರಮಾಣ ಏಕಾಏಕಿ ಏರಿಕೆಯಾಗಿದೆ. ಹೀಗಾಗಿ ಶನಿವಾರ 60 ಸಾವಿರ ಕ್ಯೂಸೆಕ್‌ನಿಂದ 90 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಹೇಳಿದೆ.

ADVERTISEMENT

80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹ:

ತುಂಗಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಆದರೆ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳು ಶಿಥಿಲಗೊಂಡಿರುವ ಕಾರಣ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹ ಮಾಡುವುದು ಬೇಡ ಎಂದು ತಜ್ಞರು ಸಲಹೆ ನೀಡಿದ್ದರು. ಗರಿಷ್ಠ  80 ಟಿಎಂಸಿ ಅಡಿಗೆ ಮಿತಿಗೊಳಿಸಿ ಉಳಿದ ನೀರನ್ನು ನದಿಗೆ ಹರಿಸಬೇಕು ಎಂಬ ತಜ್ಞರ ಸಲಹೆಯಂತೆ ಜುಲೈ 1ರಿಂದಲೇ ನದಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಕಳೆದ 25 ದಿನಗಳಿಂದ ಸತತವಾಗಿ ನೀರು ಅಣೆಕಟ್ಟೆಯಿಂದ ನದಿಗೆ ಹರಿಯುತ್ತಲೇ ಇದೆ. ಜುಲೈ 2ರಿಂದ ಎಡದಂತೆ ಕಾಲುವೆಗೆ ಹಾಗೂ 10ರಿಂದ ಬಲದಂಡೆಯ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

ಹಂಪಿಯಲ್ಲಿ ಜಲವೈಭವ:

ತುಂಗಭದ್ರಾ ನದಿ ತುಂಬಿ ಹರಿಯುವ ಕಾರಣ ಹಂಪಿಯಲ್ಲಿ ಜಲವೈಭವ ಸೃಷ್ಟಿಯಾಗಿದೆ. ಹಂಪಿಯ ಪುರಂದರ ಮಂಟಪ ಜುಲೈ 2ರಿಂದಲೇ ಬಹುತೇಕ ಮುಳುಗಿದ್ದು, ಜುಲೈ 5ರಂದು ಸಂಪೂರ್ಣ ಮುಳುಗಡೆಯಾಗಿತ್ತು. ಬಳಿಕವೂ ನದಿಯಲ್ಲಿ ನೀರು ಹರಿಯುತ್ತಲೇ ಇರುವ ಕಾರಣ ಮಂಟಪದ ಬಹುತೇಕ ಭಾಗ ಈಗಲೂ ಮುಳುಗಡೆಯಾಗಿಯೇ ಇದೆ. ಕಳೆದ ವರ್ಷವೂ ಈ ಮಂಟಪ ಒಂದೂವರೆ ತಿಂಗಳ ಕಾಲ ಬಹುತೇಕ ಮುಳುಗಿಯೇ ಇತ್ತು.

ಅಣೆಕಟ್ಟೆಯ ಸೊಬಗು: 

ತುಂಗಭದ್ರಾ ಅಣೆಕಟ್ಟೆಗೆ ಬರುವ ಪ್ರವಾಸಿಗರ ಸಂಖ್ಯೆ ಜುಲೈ ಮೊದಲ ವಾರದಿಂದಲೇ ಹೆಚ್ಚಾಗಿದೆ. ಸಂಜೆ ಹೊತ್ತು ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳ ಬಣ್ಣಬಣ್ಣದ ದೀಪ ಉರಿಸುವುದರಿಂದ ಹರಿಯುವ ಜಲರಾಶಿಯಲ್ಲಿ ದೀಪದ ಬೆಳಕು ಸೊಬಗನ್ನು ಇಮ್ಮಡಿಗೊಳಿಸುತ್ತಿದೆ. ಇದೀಗ ಮತ್ತೆ ಹೆಚ್ಚು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸುವ ಕಾರಣ ಅಣೆಕಟ್ಟೆಯ ಸೌಂದರ್ಯ ಇಮ್ಮಡಿಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.