ADVERTISEMENT

ಉಚ್ಚಂಗಿದುರ್ಗ: ಉಚ್ಚೆಂಗೆಮ್ಮ ದೇವಿ ಹರಕೆ ತೀರಿಸಲು ಬೆಟ್ಟ ಹತ್ತಿದ್ದ ಭಕ್ತ ಸಾವು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:49 IST
Last Updated 20 ಅಕ್ಟೋಬರ್ 2021, 16:49 IST
ಹುಚ್ಚಪ್ಪ
ಹುಚ್ಚಪ್ಪ   

ಉಚ್ಚಂಗಿದುರ್ಗ (ವಿಜಯನಗರ ಜಿಲ್ಲೆ): ಗ್ರಾಮದ ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಉಚ್ಚೆಂಗೆಮ್ಮ ದೇವಿ ದರ್ಶನಕ್ಕೆ ಆಗಮಿಸಿದ್ದ ಭಕ್ತರೊಬ್ಬರು ಬುಧವಾರ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.

ದಾವಣಗೆರೆ ನಗರದ ಹುಚ್ಚಪ್ಪ(60) ಹೃದಯಾಘಾತದಿಂದ ಮೃತಪಟ್ಟ ಭಕ್ತ. ಸೀಗೆ (ಭೂಮಿ) ಹುಣ್ಣಿಮೆ ಅಂಗವಾಗಿ ಹರಕೆ ತೀರಿಸಲು ಮೆಟ್ಟಿಲುಗಳ ಮೂಲಕ ಎತ್ತರದ ಬೆಟ್ಟ ಹತ್ತಿದ್ದ ಹುಚ್ಚಪ್ಪ ದೈಹಿಕವಾಗಿ ಬಳಲಿದ್ದರು. ದೇವಿಯ ಭಕ್ತ ತೀವ್ರವಾಗಿ ಬಳಲುತ್ತಿರುವ ವಿಷಯ ತಿಳಿದ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ವರ್ಗ ನೀರುಕೊಟ್ಟು ಉಪಚರಿಸಿದ್ದಾರೆ. ಆದರೆ, ಬೆಟ್ಟದ ಮೇಲಿಂದ ಕೆಳಗಿಳಿಸುವ ಮಾರ್ಗ ಮಧ್ಯೆಯೇ ಭಕ್ತ ಹುಚ್ಚಪ್ಪ ಮೃತಪಟ್ಟಿದ್ದಾರೆ.

'ಮೃತ ಹುಚ್ಚಪ್ಪ ಕೆಲ ತಿಂಗಳುಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸಂಬಂಧಿಯೊಬ್ಬರ ಸಲಹೆ ಮೇರೆಗೆ ಐದು ಹುಣ್ಣಿಮೆಗೆ ಕ್ಷೇತ್ರಕ್ಕೆ ಆಗಮಿಸುವ ಹರಕೆಯನ್ನು ಅವರು ಹೊತ್ತಿದ್ದರು. ಈ ಹಿಂದಿನ ಎರಡು ಹುಣ್ಣಿಮೆಗೆ ಆಗಮಿಸಿ ಹರಕೆ ತೀರಿಸಿದ್ದರು. ಸೀಗೆ ಹುಣ್ಣಿಮೆ ಅವರ ಮೂರನೇ ಹುಣ್ಣಿಮೆ ಆಗಿತ್ತು' ಎಂದು ತಿಳಿದುಬಂದಿದೆ'.

ADVERTISEMENT

'ಧಾರ್ಮಿಕ ಪ್ರವಾಸಿ ತಾಣವಾಗಿರುವ ಉಚ್ಚಂಗಿದುರ್ಗಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಬೆಟ್ಟದ ಮೇಲೆ ತಾತ್ಕಾಲಿಕ ಆರೋಗ್ಯ ಸಿಬ್ಬಂದಿಗಳ ನಿಯೋಜನೆ ಅಗತ್ಯವಾಗಿದ್ದು, ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಉಚ್ಚೆಂಗೆಮ್ಮ ದೇವಿ ಭಕ್ತ ಹುಚ್ಚಪ್ಪ ಹೃದಯ ಸಂಬಂಧಿ ಕಾಯಿಲೆ ಬಳಲುತ್ತಿರುವ ಕುರಿತು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದು. ಬೆಟ್ಟದ ಮೇಲಿಂದ ಮೃತದೇಹ ಸಾಗಿಸಿ, ಆಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಡಲಾಯಿತು' ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.