ADVERTISEMENT

ವಿಜಯನಗರ | ಸ್ಥಳೀಯರನ್ನು ಹೊರಗಿಟ್ಟು ಯುನೆಸ್ಕೊ ಸಭೆ; ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 4:18 IST
Last Updated 31 ಜುಲೈ 2025, 4:18 IST
<div class="paragraphs"><p>ಹೊಸಪೇಟೆ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ನಡೆದ ‘ಯುನೆಸ್ಕೊ’ ಅಧಿಕಾರಿಗಳ ಸಭೆ</p></div>

ಹೊಸಪೇಟೆ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ನಡೆದ ‘ಯುನೆಸ್ಕೊ’ ಅಧಿಕಾರಿಗಳ ಸಭೆ

   

ಹೊಸಪೇಟೆ (ವಿಜಯನಗರ): ಹೊಸಮಲಪನಗುಡಿಯ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ‘ಯುನೆಸ್ಕೊ’ ಅಧಿಕಾರಿಗಳ ಉಪಸ್ಥಿತಿಯಲ್ಲಿ ‘ವಿಶ್ವ ಪರಂಪರೆ, ಸುಸ್ಥಿರ ಅಭಿವೃದ್ಧಿ ಮತ್ತು ಸ್ಥಳೀಯ ಸಮುದಾಯಗಳು’ ಎಂಬ ವಿಷಯದ ಮೇಲೆ ಸಭೆ ನಡೆದಿದ್ದು, ಸ್ಥಳೀಯರನ್ನು ಮಾತ್ರ ಸಭೆಯಿಂದ ದೂರ ಇಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ವತಿಯಿಂದ ಈ ಸಭೆ ನಡೆದಿದ್ದು, ಹಂಪಿ ಮತ್ತು ಸುತ್ತಮುತ್ತಲಿನ ಕಟ್ಟಡ ನಿರ್ಮಾಣ ಉಪ ಕಾನೂನುಗಳು ಮತ್ತು ವಾಸ್ತುಶಿಲ್ಪ ಮಾರ್ಗಸೂಚಿಗಳ ಕುರಿತು ತಾಂತ್ರಿಕ ಸಮಲೋಚನೆ ಮುಖ್ಯ ಉದ್ದೇಶವಾಗಿತ್ತು. ಸ್ಥಳೀಯರನ್ನು ತೊಡಗಿಸಿಕೊಂಡೇ ಈ ಸಭೆ ನಡೆಸಬೇಕೆಂಬ ಸೂಚನೆ ಇದ್ದರೂ, ಅದನ್ನು ಉಲ್ಲಂಘಿಸಿ ಸ್ಥಳೀಯರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ, ಸಭೆಯಿಂದ ಜಿಲ್ಲಾಧಿಕಾರಿ ಅವರನ್ನೂ ಸಹ ದೂರ ಇಟ್ಟಿದ್ದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ವಿಶ್ವ ಪಾರಂಪರಿಕ ತಾಣವಾಗಿ ಹಂಪಿ ಬದಲಾದ ಬಳಿಕ ಸ್ಥಳೀಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದೊಂದು ಉತ್ತಮ ವೇದಿಕೆ ಆಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಆಯುಕ್ತರನ್ನು ಸಂಪರ್ಕಿಸಿದರೆ ಸಬೂಬು ನೀಡಿ ಜನರ ಅಹವಾಲನ್ನು ಕಡೆಗಣಿಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.

‘ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರನ್ನಾದರೂ ಸಭೆಗೆ ಕರೆಯಬೇಕಿತ್ತು. ಜನರಿಗೆ ನೇರವಾಗಿ ಸಿಗುವಂತಹವರು ಇವರೇ. ಇವರನ್ನೇ ಸಭೆಯಿಂದ ದೂರ ಇಡಲಾಗಿದೆ’ ಎಂದೂ ಅವರು ದೂರಿದರು.

ಉಗ್ರಪ್ಪ ಟೀಕೆ:  ‘ಸ್ಥಳೀಯರನ್ನು ಹೊರಗಿಟ್ಟು ನಡೆಸುವ ಸಭೆಯಿಂದ ಯಾವುದೇ ಅಭಿವೃದ್ಧಿಯೂ ಸಾಧ್ಯವಿಲ್ಲ. ಹಂಪಿಯಲ್ಲಿ ಸಂಗ್ರಹವಾಗುವ ದುಡ್ಡನ್ನು ಹಂಪಿಗೇ ವಿನಿಯೋಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದರು.

ಸಭೆಯ ಕುರಿತಂತೆ ಎಎಸ್‌ಐ, ಹವಾಮ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

‘ಇಲ್ಲಿ ಉಳ್ಳವರಿಗೆ ಪ್ರತ್ಯೇಕ ನ್ಯಾಯ’

‘ಯಾವುದೇ ಪಾರಂಪರಿಕ ಪ್ರವಾಸಿ ತಾಣ ಉತ್ತಮ ರೀತಿಯಲ್ಲಿ ಇರಬೇಕಿದ್ದರೆ ಸ್ಥಳೀಯ ಮೂಲನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಭಿವೃದ್ಧಿ ಕೆಲಸ ಮಾಡಬೇಕು. 42 ಚದರ ಕಿ.ಮೀ. ಪ್ರದೇಶವನ್ನು ವ್ಯಾಪಿಸಿಕೊಂಡಿರುವ 29 ಹಳ್ಳಿಗಳನ್ನು ಒಳಗೊಂಡ ಹಂಪಿ ಇದೀಗ ಕೆಲವೇ ಕೆಲವು ಬಲಾಢ್ಯರ ಪಾಲಾಗುತ್ತಿದೆ ಕೋರ್‌ ಏರಿಯಾದಲ್ಲೇ ಬೃಹತ್‌ ಹೋಟೆಲ್‌ ರೆಸಾರ್ಟ್‌ ಕಟ್ಟಿಕೊಳ್ಳಲು ಅವಕಾಶ ಕೊಡಲಾಗಿದೆ. ಸ್ಥಳೀಯರು ಒಂದು ಕಲ್ಲು ಆಚೀಚೆ ಸರಿಸುವುದಕ್ಕೂ ನಿರ್ಬಂಧ ಇದೆ.  ಇದರ ಬಗ್ಗೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಇಲ್ಲಿ ಉಳ್ಳವರಿಗೆ ಪ್ರತ್ಯೇಕ ನ್ಯಾಯ ಇರುವಂತೆ ಕಾಣಿಸುತ್ತಿದೆ’ ಎಂದು ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಪ್ರಪಂಚದ ಎರಡನೇ ಅತಿ ಸುಂದರ ಪ್ರವಾಸಿ ತಾಣ ಹಂಪಿಯ ಅಭಿವೃದ್ಧಿ ಎಂದರೆ ರಸ್ತೆ ರೈಲು ವಿಮಾನನಿಲ್ದಾಣ ಸಹಿತ ಇತರ ಸೌಲಭ್ಯಗಳನ್ನು ಒದಗಿಸುವುದು. ಆ ನಿಟ್ಟಿನಲ್ಲಿ ಚಿಂತನೆ ನಡೆಯಲಿ
- ವಿ.ಎಸ್‌.ಉಗ್ರಪ್ಪ, ಮಾಜಿ ಸಂಸದ
ದುರುದ್ದೇಶದಿಂದ ಹಂಪಿಯ ಮೂ ನಿವಾಸಿಗಳನ್ನು ಮತ್ತು ಸಮುದಾಯದವರನ್ನು ಯುನೆಸ್ಕೊ ಹವಾಮ ಎಎಸ್‌ಐ ಅಧಿಕಾರಿಗಳು ಕಡೆಗಣಿಸಿರುವುದು ಅತ್ಯಂತ ಖಂಡನೀಯ
- ವಿರುಪಾಕ್ಷಿ ವಿ, ಹಂಪಿ ಅಧ್ಯಕ್ಷರು, ‘ಹವಾಮ’ ವ್ಯಾಪ್ತಿಯ ಹಳ್ಳಿಗಳ ಕ್ಷೇಮಾಭಿವೃದ್ಧಿ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.