ADVERTISEMENT

ಹೂವಿನಹಡಗಲಿ | ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ: ಆಚರಣೆ ನೆರವೇರಿಸುವ ಹಿಂದೂಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 5:50 IST
Last Updated 5 ಜುಲೈ 2025, 5:50 IST
ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿಯ ಪಕ್ಕೀರಸ್ವಾಮಿ ದೇವಸ್ಥಾನದಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಲಾಗಿದೆ
ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿಯ ಪಕ್ಕೀರಸ್ವಾಮಿ ದೇವಸ್ಥಾನದಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಲಾಗಿದೆ   

ಹೂವಿನಹಡಗಲಿ: ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಮುಸ್ಲಿಮರಿಲ್ಲ. ಆದರೆ, ಹಿಂದೂಗಳು ಮೊಹರಂ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ವಂತಿಗೆ ಸಂಗ್ರಹಿಸಿ, ಎಲ್ಲರೂ ಜೊತೆಗೂಡಿ ಮೊಹರಂ ಆಚರಿಸುತ್ತಾರೆ.

ಗ್ರಾಮದ ಶಿರಹಟ್ಟಿ ಪಕ್ಕೀರಸ್ವಾಮಿ ದೇವಸ್ಥಾನದಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಸಮೀಪದ ಮಕರಬ್ಬಿ ಗ್ರಾಮದಿಂದ ಮುಜಾವರರನ್ನು ಆಹ್ವಾನಿಸಿ ಮೊಹರಂ ವಿಧಿ ವಿಧಾನ ನಡೆಸಲಾಗುತ್ತದೆ.

ಶುಕ್ರವಾರ ರಾತ್ರಿಯಿಡೀ ‘ಖತಲ್ ಕಿ ರಾತ್’ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಪೀರಲ ದೇವರು ಪ್ರತಿಷ್ಠಾಪಿಸಿರುವ ಕಟ್ಟೆಯ ಮುಂದೆ ಅಲಾಯಿ ಕುಣಿಯಲ್ಲಿ ನಿಗಿ ನಿಗಿ ಕೆಂಡ ತುಳಿದು ಯುವಕರು ಹರಕೆ ತೀರಿಸಿದರು. ಮಹಿಳೆಯರು, ಮಕ್ಕಳು ಶ್ರದ್ಧಾಭಕ್ತಿಯಿಂದ ಸಕ್ಕರೆ, ಬೆಲ್ಲದ ನೈವೇದ್ಯ ಅರ್ಪಿಸುತ್ತಾರೆ.

ADVERTISEMENT

ಶನಿವಾರ ಗ್ರಾಮದ ಮುಖ್ಯ ಬೀದಿಯಲ್ಲಿ ಪೀರಲ ದೇವರ ಮೂರ್ತಿಗಳ ಮೆರವಣಿಗೆ ನಡೆಸಿ ವಿಸರ್ಜಿಸಲಾಗುತ್ತದೆ.

‘ಗ್ರಾಮದಲ್ಲಿ ಎಲ್ಲ ಜಾತಿಯವರು ಒಗ್ಗಟ್ಟಿನಿಂದ ಮೊಹರಂ ಆಚರಿಸುತ್ತೇವೆ. ದೇವರು ಇಷ್ಟಾರ್ಥ ನೇರವೇರಿಸುವ ನಂಬಿಕೆಯಿಂದ ಸುತ್ತಮುತ್ತಲ ಗ್ರಾಮಗಳ ಭಕ್ತರು ಇಲ್ಲಿಗೆ ಬಂದು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಾರೆ’ ಎಂದು ಮುಖಂಡ ಬಾರಿಕರ ಲಕ್ಷ್ಮಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.