ಕೂಡ್ಲಿಗಿ ತಾಲ್ಲೂಕಿನ ಜಮೀನೊಂದರಲ್ಲಿ ಬೆಳೆದು ನಿಂತಿರುವ ಮೆಕ್ಕೆ ಜೋಳ.
ಕೂಡ್ಲಿಗಿ: ಅತಿಯಾದ ಬಳಕೆ ಹಾಗೂ ಮೆಕ್ಕೆ ಜೋಳ ಬಿತ್ತನೆ ಪ್ರದೇಶ ಹೆಚ್ಚಳವಾಗಿದ್ದು ಯೂರಿಯಾ ಆಭಾವಕ್ಕೆ ಕಾರಣವಾಗಿದೆಯೇ ಎಂಬ ಪ್ರಶ್ನೆ ಇದೀಗ ಮೇಲ್ನೋಟಕ್ಕೆ ಕಾಡತೊಡಗಿದೆ.
ತಾಲ್ಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಹೆಚ್ಚುವರಿಯಾಗಿ 10,384 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ.
ಕಳೆದ ಮುಂಗಾರು ಹಂಗಾಮಿನಲ್ಲಿ 15591 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ಹಂಗಾಮಿನಲ್ಲಿ 25975 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳ ಬಿತ್ತನೆಯಾಗಿದೆ.
ಅಲ್ಲದೆ ಬಿತ್ತನೆ ಮಾಡಿದ ಮೂರು ನಾಲ್ಕು ದಿನಗಳಲ್ಲಿ ಕಳೆ ನಾಶಕ ಸಿಂಪಡಣೆ ಮಾಡುವಾಗ ಪ್ರತಿ ಎಕರಗೆ 20ಕೆಜಿಯಂತೆ ಯೂರಿಯಾ ಮಿಶ್ರಣ ಮಾಡಿ ಉಪಯೋಗ ಮಾಡಲಾಗುತ್ತದೆ. ಇದರಿಂದ ಈ ಹಂಗಾಮಿನಲ್ಲಿ 415 ಮೆಟ್ರಿಕ್ ಟನ್ ಹೆಚ್ಚುವರಿ ಯುರಿಯಾ ಗೂಬ್ಬರ ಬೇಡಿಕೆ ಹೆಚ್ಚಿದೆ.
ಪ್ರತಿ ಎಕರೆಗೆ 50ಕೆಜಿ ಯೂರಿಯಾವನ್ನು ಬಿತ್ತನೆ ಮಾಡಿದಾಗ ಒಂದು ಬಾರಿ ಮಾತ್ರ ಹಾಕಬೇಕು. ಇದನ್ನು ಮಾನದಂಡವನ್ನಾಗಿಟ್ಟುಕೊಂಡು ಪ್ರತಿ ತಾಲ್ಲೂಕಿನಲ್ಲಿ ಬಿತ್ತನೆ ಪ್ರದೇಶಕ್ಕೆ ಆನುಗುಣವಾಗಿ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಆದರೆ, ಕೆಲ ರೈತರು ಮೆಕ್ಕೆ ಜೋಳಕ್ಕೆ ಎರಡು, ಮೂರು ಬಾರಿ ಹಾಕುತ್ತಾರೆ. ಇದರಿಂದ ಅಗತ್ಯಕ್ಕಿಂತ ಎರಡು ಪಟ್ಟು ಬೇಡಿಕೆ ಉಂಟಾಗುತ್ತದೆ.
ಆದರೆ ಪೂರೈಕೆ ಮಾತ್ರ ಸ್ಥಿತರವಾಗಿರುತ್ತದೆ. ಯೂರಿಯಾ ಗೊಬ್ಬರದ ಬಳಕೆಯಿಂದ ಮಣ್ಣು ಮತ್ತು ನೀರು ಸೇರಿದಂತೆ ಅನೇಕ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಶೇ 50ಕ್ಕಿಂತ ಕಡಿಮೆ ಯೂರಿಯಾ ಪೂರೈಕೆ ಮಾಡಲು ಮುಂದಾಗಿದ್ದು, ನ್ಯಾನೊ ಯೂರಿಯಾವನ್ನು ಪ್ರೋತ್ಸಾಹಿಸುತ್ತಿದೆ.
ನ್ಯಾನೊ ಯೂರಿಯಾ ಬಳಕೆ ರೈತರ ಹಿಂದೇಟು
ಸರ್ಕಾರವೇನೋ ನ್ಯಾನೊ ಯೂರಿಯಾ ಬಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡುತ್ತದೆ. ಆದರೆ, ಇದನ್ನು ಬಳಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ನ್ಯಾನೊ ಯುರಿಯಾ ಸಿಂಪಡಣೆ ಮಾಡುವುದು ತುಸು ಕಷ್ಟದ ಕೆಲಸವಾಗಿದ್ದು, ಇದನ್ನು ಸಿಂಪರಣೆ ಮಾಡಲು ಹೆಚ್ಚು ವೆಚ್ಚ ಬರುತ್ತದೆ ಎಂದು ರೈತರು ಹೇಳುತ್ತಾರೆ. ಆದರೆ, ಯೂರಿಯಾ ರಸ ಗೊಬ್ಬರವನ್ನು ಸಲೀಸಾಗಿ ಬೆಳೆಗೆ ಹಾಕಬಹುದು. ಇದರಿಂದ ರೈತರು ರಸ ಗೊಬ್ಬರದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಹರಳು ಗೊಬ್ಬರಕ್ಕಿಂತ ನ್ಯಾನೊ ಗೊಬ್ಬರ ಶೇ 100ರಷ್ಟು ಉತ್ತಮ ಫಲಿತಾಂಶ ನೀಡುತ್ತದೆ. ಅದ್ದರಿಂದ ರೈತರು ನ್ಯಾನೊ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು.ಆರ್.ವಿ.ತೇಜಾವರ್ಧನ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಕೂಡ್ಲಿಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.