ADVERTISEMENT

8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಹಂಪಿ ಸ್ಮಾರಕಗಳ ಎದುರು ಯೋಗ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಮೇ 2022, 8:30 IST
Last Updated 8 ಮೇ 2022, 8:30 IST
ಯೋಗ
ಯೋಗ    

ಹೊಸಪೇಟೆ (ವಿಜಯನಗರ): ‘ಎಂಟನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳ ಎದುರು ಯೋಗ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಶ್ವಾಸ ಯೋಗ ಸಂಸ್ಥೆಯ ವಚನಾನಂದ ಸ್ವಾಮೀಜಿ ತಿಳಿಸಿದರು.

‘ಆಯುಷ್‌ ಇಲಾಖೆ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ, ಪ್ರವಾಸೋದ್ಯಮ ಇಲಾಖೆ ಹಾಗೂ ಶ್ವಾಸ ಯೋಗ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸಂಘಟಿಸಲಾಗುವುದು. ಯೋಗ ದಿನಾಚರಣೆಗೆ ದೇಶದ 75 ಐಕಾನಿಕ್‌ ಸ್ಥಳಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ರಾಜ್ಯದ ಹಂಪಿ, ಮೈಸೂರು, ಐಹೊಳೆ, ಗೋಳಗುಮ್ಮಟ ಸೇರಿವೆ. ಈ ಎಲ್ಲ ಸ್ಥಳಗಳಲ್ಲಿ ಯೋಗ ಪ್ರದರ್ಶನಕ್ಕೆ ದೇಶದ 100 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದ್ದು, ಹಂಪಿ ಕಾರ್ಯಕ್ರಮಕ್ಕೆ ಶ್ವಾಸ ಯೋಗ ಸಂಸ್ಥೆ ಆಯ್ಕೆಯಾಗಿದೆ’ ಎಂದು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಮೇ 15ರಂದು ಹಂಪಿ ವಿಜಯ ವಿಠಲ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 6ರಿಂದ 7ರ ವರೆಗೆ ಯೋಗ ಶಿಬಿರ ನಡೆಯಲಿದ್ದು, ಇದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಹಂಪಿ ಉಗ್ರ ನರಸಿಂಹ, ಮಹಾನವಮಿ ದಿಬ್ಬ, ಆನೆಸಾಲು ಮಂಟಪ, ಕಮಲ ಮಹಲ್‌ ಸ್ಮಾರಕಗಳ ಪರಿಸರದಲ್ಲಿ ಶಿಬಿರ ಜರುಗಲಿದೆ. ಜೂನ್‌ 21ರಂದು ಎದುರು ಬಸವಣ್ಣ ಮಂಟಪದ ಎದುರು ವಿಶ್ವ ಯೋಗ ದಿನ ಆಚರಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲೇ ಯೋಗ ದಿನ ಆಚರಿಸುತ್ತಿರುವುದು ವಿಶೇಷ. ಯೋಗ ಪ್ರದರ್ಶನದ ಮೂಲಕ ಹಂಪಿ ಸ್ಮಾರಕಗಳನ್ನು ಜಗತ್ತಿಗೆ ಪರಿಚಯಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ಯೋಜನೆ ಇದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ಎಲ್ಲ ರೀತಿಯ ಸಹಕಾರ ಕೊಡುವ ಭರವಸೆ ನೀಡಿದೆ. ಯೋಗದ ಮೂಲಕ ಕರ್ನಾಟಕವನ್ನು ಆರೋಗ್ಯ ರಾಜ್ಯ, ರೋಗ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಮೇ 15ರಿಂದ ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಾದ್ಯಂತ ಯೋಗ ರಥಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ರಥಯಾತ್ರೆ ಸಂದರ್ಭದಲ್ಲಿ ಜನರಿಗೆ ಯೋಗದ ಮಹತ್ವ ತಿಳಿಸಿಕೊಡಲಾಗುವುದು. ಜೂನ್‌ 21ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಗ ಅಭಿಯಾನ ನಡೆಸಲಾಗುವುದು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು. ಡಾ. ರಾಜಶೇಖರ್‌, ದ್ರಾಕ್ಷಾಯಿಣಿ ಶಿವಕುಮಾರ ಇದ್ದರು.

ಎಲ್ಲೆಲ್ಲಿ ನಡೆಯುತ್ತೆ ಯೋಗ ಶಿಬಿರ?
ದಿನಾಂಕ ಸ್ಥಳ
ಮೇ 15 ವಿಜಯ ವಿಠಲ ದೇಗುಲ ಹಂಪಿ
ಮೇ 22 ಉಗ್ರನರಸಿಂಹ ಸ್ಮಾರಕ, ಹಂಪಿ
ಮೇ 29 ಮಹಾನವಮಿ ದಿಬ್ಬ, ಹಂಪಿ
ಜೂನ್‌ 5 ಆನೆಸಾಲು ಮಂಟಪ, ಹಂಪಿ
ಜೂನ್‌ 12 ಕಮಲ ಮಹಲ್‌, ಹಂಪಿ
ಜೂನ್‌ 19, 21 ಎದುರು ಬಸವಣ್ಣ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.