ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ: ಹೊರಡದ ಅಧಿಸೂಚನೆ

ಹಾಲಿ ಕುಲಪತಿ ಅವಧಿ ಮಾರ್ಚ್‌ 23ಕ್ಕೆ ಅಂತ್ಯ

ಎಂ.ಜಿ.ಬಾಲಕೃಷ್ಣ
Published 12 ಜನವರಿ 2026, 6:02 IST
Last Updated 12 ಜನವರಿ 2026, 6:02 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ: ಕನ್ನಡ ಭಾಷೆ, ಸಂಸ್ಕೃತಿ, ಶಾಸನ, ಹಸ್ತಪ್ರತಿಗಳ ಸಂಶೋಧನೆಗಾಗಿಯೇ ಸ್ಥಾಪನೆಗೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲಿ ಕುಲಪತಿ ‍ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರ ಅಧಿಕಾರ ಅವಧಿ ಮಾರ್ಚ್‌ 23ರಂದು ಕೊನೆಗೊಳ್ಳಲಿದ್ದು, ಹೊಸ ಕುಲಪತಿ ನೇಮಕಾತಿಗಾಗಿ ಇನ್ನೂ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಿಲ್ಲ.

ಸಾಮಾನ್ಯವಾಗಿ ಮೂರು ತಿಂಗಳ ಮೊದಲಾಗಿ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗುತ್ತದೆ, ಅದರಂತೆ ಕಳೆದ ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಅದರ ಬಗ್ಗೆ ಯಾವುದೇ ಬೆಳವಣಿಗೆಯೂ ಆಗಿಲ್ಲದಿರುವುದಕ್ಕೆ ಶೈಕ್ಷಣಿಕ ವಲಯದಲ್ಲಿ ಅಚ್ಚರಿ ವ್ಯಕ್ತವಾಗಿದೆ.

ನಿಯಮದಂತೆ ಯಾವುದೇ ವಿಶ್ವವಿದ್ಯಾಲಯದಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು ಅರ್ಜಿ ಸಲ್ಲಿಸಬಹುದು. ಬಳಿಕ ಸರ್ಕಾರವು ಯುಜಿಸಿ ಪ್ರತಿನಿಧಿ, ಸರ್ಕಾರದ ಪ್ರತಿನಿಧಿ ಹಾಗೂ ಸಿಂಡಿಕೇಟ್‌ ಪ್ರತಿನಿಧಿಯನ್ನು ಒಳಗೊಂಡ ಶೋಧನಾ ಸಮಿತಿ ರಚಿಸುತ್ತದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಮೂರು ಹೆಸರುಗಳನ್ನು ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡುತ್ತದೆ. ಈ ಎಲ್ಲ ಪ್ರಕ್ರಿಯೆಗೆ ಮೂರು ತಿಂಗಳ ಕಾಲಾವಧಿ ಬೇಕಾಗುವ ಕಾರಣ ಹಾಲಿ ಕುಲಪತಿಗಳ ಅವಧಿ ಕೊನೆಗೊಳ್ಳುವ ಮೊದಲೇ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಕನ್ನಡ ವಿವಿ ವಿಚಾರದಲ್ಲಿ ಈ ಬೆಳವಣಿಗೆ ಇದುವೆಗೆ ನಡೆದಿಲ್ಲ.

ADVERTISEMENT

ಸಾಮಾಜಿಕ ನ್ಯಾಯ ಬೇಕು: ವಿಶ್ವವಿದ್ಯಾಲಯದ 35 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ತಲಾ ಮೂವರು ಲಿಂಗಾಯತ, ಒಕ್ಕಲಿಗರು, ಒಬ್ಬರು ಒಬಿಸಿ, ಒಬ್ಬರು ಬಂಟ ಸಮುದಾಯದವರು ಕುಲಪತಿಗಳಾಗಿದ್ದಾರೆ. ಈ ಬಾರಿಯಾದರೂ ಪರಿಶಿಷ್ಟ ಜಾತಿ, ‍ಪರಿಶಿಷ್ಟ ಪಂಗಡ ಅಥವಾ ಅಲ್ಪಸಂಖ್ಯಾತ ಸಮುದಾಯದ ಅರ್ಹ ವಿದ್ವಾಂಸರಿಗೆ ಕುಲಪತಿ ಹುದ್ದೆ ಸಿಗುವಂತಾಗಬೇಕು ಎಂಬುದು ನಮ್ಮ ಒತ್ತಾಯ ಎಂದು ಸಿಂಡಿಕೇಟ್ ಸದಸ್ಯ ಬಣ್ಣದಮನೆ ಸೋಮಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯವಂತೂ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ. ಇದೊಂದು ಸಂಶೋಧನಾ ವಿಶ್ವವಿದ್ಯಾಲಯ, ಕುಲಪತಿ ಆಯ್ಕೆ ಎಂಬುದು ಇಲ್ಲಿ ಬಹಳ ಮುಖ್ಯ. ಸರ್ಕಾರ ವಿಳಂಬ ಮಾಡದೆ ನೂತನ ಕುಲಪತಿ ಆಯ್ಕೆಗೆ ತಕ್ಷಣ ಕ್ರಮ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

3 ತಿಂಗಳ ಮೊದಲೇ ಪ್ರಕ್ರಿಯೆ ಶುರುವಾಗಬೇಕು ಅರ್ಹರಿಗೆ ಅರ್ಜಿ ಸಲ್ಲಿಸಲು ಅವಕಾಶ ಬೇಕು ಸಾಮಾಜಿಕ ನ್ಯಾಯಕ್ಕೆ ಹೆಚ್ಚಿದ ಒತ್ತಡ

ಎಸ್‌ಸಿ ಎಸ್‌ಟಿ ಅಥವಾ ಅಲ್ಪಸಂಖ್ಯಾತ ಸಮುದಾಯದವರನ್ನೇ ಕುಲಪತಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ಕೋರಿ ಈಗಾಗಲೇ ಜನಪ್ರತಿನಿಧಿಗಳ ಮೂಲಕ ಒತ್ತಡ ತರುವ ಕೆಲಸ ನಡೆದಿದೆ ಬಣ್ಣದಮನೆ
ಸೋಮಶೇಖರ್ ಕನ್ನಡ ವಿವಿ ಸಿಂಡಿಕೇಟ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.