
ಹೊಸಪೇಟೆ: ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ‘ವಿಜಯ ಮಹಿಳಾ ಸುರಕ್ಷಾ ಪಡೆ’ ರಚಿಸಲಾಗಿದ್ದು, ಪ್ರತಿ ಉಪವಿಭಾಗಕ್ಕೆ ಒಂದೊಂದು ವಾಹನದಲ್ಲಿ ಆರು ಸಿಬ್ಬಂದಿ ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ.
ಲೈಂಗಿಕ ದೌರ್ಜನ್ಯ, ಪೋಕ್ಸೊ ಪ್ರಕರಣಗಳು, ಕೆಲಸದ ಸ್ಥಳದಲ್ಲಿ ಮಾನಸಿಕ, ದೈಹಿಕ ಕಿರುಕುಳ, ಕುಟುಂಬದಲ್ಲಿನ ಹಿಂಸೆ ಮೊದಲಾದ ವಿದ್ಯಮಾನಗಳನ್ನು ನಿಯಂತ್ರಿಸುವುದು, ಮಹಿಳೆಯರು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದೆ ಇರುವಾಗ ಅವರಿಗೆ ಧೈರ್ಯ ಹೇಳಿ, ಅವರ ಹೆಸರು, ವಿಳಾಸ ಗೋಪ್ಯವಾಗಿಟ್ಟು, ಅವರಿಗೆ ಕಿರುಕುಳ ನೀಡುವಂತಹವರನ್ನು ಕರೆದು ಬುದ್ಧಿಹೇಳುವ ಕೆಲಸವನ್ನು ಈ ಪಡೆ ಮಾಡಲಿದೆ. ಇಂತಹ ಮಹತ್ವದ ಪಡೆಗೆ ಶೀಘ್ರದಲ್ಲಿಯೇ ಚಾಲನೆ ಸಿಗುವ ನಿರೀಕ್ಷೆ ಇದೆ.
‘ಎಎಸ್‌ಐ ಅಥವಾ ಹೆಡ್‌ಕಾನ್‌ಸ್ಟೆಬಲ್ ಒಬ್ಬರು ಈ ಪಡೆಯ ಮುಖ್ಯಸ್ಥರಾಗಿರುತ್ತಾರೆ, ಐದು ಮಂದಿ ಮಹಿಳಾ ಕಾನ್‌ಸ್ಟೆಬಲ್‌ಗಳು ಇರುತ್ತಾರೆ. ಜಿಲ್ಲೆಯಲ್ಲಿ ಇಂತಹ ಮೂರು ತಂಡಗಳನ್ನು ರಚಿಸಲಾಗಿದ್ದು, ಎಲ್ಲರಿಗೂ ಕಾನೂನು ಅರಿವು, ವಾಹನ ಚಾಲನೆ ಸಹಿತ ಅಗತ್ಯದ ಎಲ್ಲ ತರಬೇತಿ ನೀಡಲಾಗಿದೆ. ಈ ತಂಡ ಸಂಚರಿಸುವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣೆಯ ಪಿಎಸ್‌ಐ ಅವರೇ ತಂಡದ ಮುಖ್ಯಸ್ಥರಾಗಿರುತ್ತಾರೆ. ಈ ಪಡೆಯ ಕೆಲಸವೂ ಪೊಲೀಸ್ ಕೆಲಸವೇ ಆಗಿರುವುದರಿಂದ ಎಲ್ಲರ ಸಹಕಾರದಲ್ಲಿ ಮಹಿಳೆಯರಿಗೆ ಮಾನಸಿಕ ರಕ್ಷಣೆ ನೀಡುವಂತಹ ವ್ಯವಸ್ಥೆ ಈ ಪಡೆಯ ಮೂಲಕ ಆಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಹಿಳೆಯರು, ಮಕ್ಕಳಿಗೆ ಕಾನೂನು ಅರಿವು ಮೂಡಿಸುವುದು, ಶಾಲೆ, ಕಾಲೇಜು, ವಸತಿ ನಿಲಯಗಳಿಗೆ ತೆರಳಿ ತೊಂದರೆಗಳ ಬಗ್ಗೆ ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳುವುದು, ಮಾದಕ ವಸ್ತು ಕುರಿತು ಜಾಗೃತಿ, ಸೈಬರ್ ಸುರಕ್ಷತೆ ಕುರಿತು ಎಚ್ಚರಿಕೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೊ ಮೊದಲಾದ ಕಾನೂನುಗಳ ಕುರಿತು ತಿಳಿವಳಿಕೆ ಮೂಡಿಸುವುದು, ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಪಡೆ ಸಕ್ರಿಯವಾಗಿ ಕೆಲಸ ಮಾಡಲಿದೆ. ಸ್ವ ರಕ್ಷಣೆಯ ತಂತ್ರಗಳ ಕುರಿತು ಸಹ ವಿದ್ಯಾರ್ಥಿನಿಯರಿಗೆ ಈ ಪಡೆ ತರಬೇತಿ ನೀಡಲಿದೆ’ ಎಂದು ಅವರು ವಿವರಿಸಿದರು.
ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಮಹಿಳಾ ಸುರಕ್ಷಾ ಪಡೆಗಳನ್ನು ರಚಿಸಲಾಗಿದೆ, ಇಲ್ಲಿ ‘ವಿಜಯ’ನಗರ ಜಿಲ್ಲೆಯ ಹೆಸರನ್ನೂ ಉಳಿಸಿಕೊಂಡು ಈ ಪಡೆಯನ್ನು ರಚಿಸಲಾಗಿದೆ.
ಸುರಕ್ಷಾ ಪಡೆಯ ವಾಟ್ಸ್‌ಆ್ಯಪ್ ನಂ. 8277977877 ಪೊಲೀಸ್ ಕಂಟ್ರೋಲ್ ರೂಂ: 9480805716/ 08394–200202 ಪೊಲೀಸ್ ತುರ್ತು ಸಹಾಯವಾಣಿ: 112
ವಾಟ್ಸ್‌ಆ್ಯಪ್ ನಂಬರ್‌ಗೆ ಕರೆ ಮಾಡಿದರೆ ಸಾಕು ಅಂತಹವರ ಗುರುತನ್ನು ಗುರುತನ್ನು ಗೌಪ್ಯವಾಗಿಟ್ಟುಕೊಂಡು ಆಗುತ್ತಿರುವ ತೊಂದರೆ ನಿವಾರಿಸುವ ಕೆಲಸವನ್ನು ಈ ಪಡೆ ಮಾಡಲಿದೆಎಸ್.ಜಾಹ್ನವಿ ಎಸ್‌ಪಿ ವಿಜಯನಗರ ಜಿಲ್ಲೆ
ಸದ್ಯ ಇಸುಜು ಮುಂದೆ ಬೊಲೆರೊ ವಿಜಯ ಮಹಿಳಾ ಸುರಕ್ಷಾ ಪಡೆಗೆ ಸದ್ಯ ಮೂರು ಇಸುಜು ವಾಹನಗಳನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಬೊಲೆರೊ ವಾಹನ ಪೂರೈಕೆಯಾದ ಬಳಿಕ ಅವುಗಳನ್ನೇ ಈ ಪಡೆಗೆ ನೀಡಲಾಗುತ್ತದೆ. ವಾಟ್ಸ್‌ಆ್ಯಪ್ ಸಹಾಯವಾಣಿ (112) ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದಾಗ ಈ ಪಡೆ ತಕ್ಷಣ ಸ್ಥಳಕ್ಕೆ ಧಾವಿಸುತ್ತದೆ. ಕರೆ ಬರದೆ ಇದ್ದಾಗಲೂ ನಿಗದಿಪಡಿಸಿದ ಸ್ಥಳಗಳಿಗೆ ತೆರಳಿ ಅಲ್ಲಿನವರಿಗೆ ಧೈರ್ಯ ತಿಳಿವಳಿಕೆ ನೀಡುವ ಕೆಲಸ ಮಾಡುತ್ತಲೇ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.