ADVERTISEMENT

ವಿಜಯನಗರ | ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ ನಿರ್ವಹಣೆಗೆ ಸಂಕಷ್ಟ!

ಉರಿಯುತ್ತಿಲ್ಲ ದೀಪ– ಎತ್ತರದ ಧ್ವಜಸ್ತಂಭದಿಂದ ಅನಾಹುತ ಸನ್ನಿಹಿತ?

ಎಂ.ಜಿ.ಬಾಲಕೃಷ್ಣ
Published 2 ಆಗಸ್ಟ್ 2025, 5:55 IST
Last Updated 2 ಆಗಸ್ಟ್ 2025, 5:55 IST
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿರುವ 405 ಅಡಿ ಎತ್ತರದ ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿರುವ 405 ಅಡಿ ಎತ್ತರದ ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ   

ಹೊಸಪೇಟೆ: ದೇಶದ ಎರಡನೇ ಅತಿ ಎತ್ತರದ (405 ಅಡಿ) ಧ್ವಜಸ್ತಂಭ ಎಂಬ ಹೆಗ್ಗಳಿಕೆಯ ನಗರದ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದ ಮಧ್ಯಭಾಗದಲ್ಲಿರುವ ಧ್ವಜಸ್ತಂಭಕ್ಕೆ ಸ್ವಾತಂತ್ರ್ಯೋತ್ಸವ ಹತ್ತಿರವಾಗುತ್ತಿದ್ದಂತೆಯೇ ನಿರ್ವಹಣೆಯ ಸಂಕಷ್ಟ ಎದುರಾಗಿದೆ. 

ಕಳೆದ ಗಣರಾಜ್ಯೋತ್ಸವ ದಿನದಂದು ಬೃಹತ್ ರಾಷ್ಟ್ರಧ್ವಜ ಮೇಲೇರುತ್ತಲೇ ದೊಪ್ಪನೆ ಕಳಚಿ ಬಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಜಿಲ್ಲಾಡಳಿತದ ಮುಖಭಂಗವಾಗಿತ್ತು. ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿರುವುದು ಬಿಟ್ಟರೆ ಧ್ವಜಸ್ತಂಭದ ನಿರ್ವಹಣೆ ವಿಚಾರದಲ್ಲಿ ಯಾವುದೇ ಆಶಾದಾಯಕ ಪ್ರಗತಿಯೂ ಆಗಿಲ್ಲ. ಅದನ್ನು ಸಾಬೀತುಪಡಿಸುವಂತೆ ಧ್ವಜಸ್ತಂಭದ ಮೇಲ್ಭಾಗದ ದೀಪ ಉರಿಯದೆ ಹಲವು ದಿನಗಳೇ ಕಳೆದಿದ್ದು, ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು ಅನಾಹುತ ಸಂಭವಿಸಬಹುದೇ ಎಂಬ ಆತಂಕ ಮನೆಮಾಡಿದೆ.

ನಗರಸಭೆಯಲ್ಲಿ ಈಚೆಗೆ ಆಗಿರುವ ನಿರ್ಣಯದಂತೆ ಧ್ವಜಸ್ತಂಭದ ನಿರ್ವಹಣೆಯನ್ನು ಮತ್ತೆ ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ವಹಿಸಿಕೊಳ್ಳುವಂತೆ ಕೋರಿ ಪತ್ರ ಸಲ್ಲಿಸಲಾಗಿದೆ. ಇದು ಸಾಧ್ಯವಿಲ್ಲ, ನಗರಸಭೆಯೇ ನಿರ್ವಹಿಸಬೇಕು ಎಂಬ ಉತ್ತರವನ್ನು ಪಿಡಬ್ಲ್ಯುಡಿ ಇಲಾಖೆ ಬರೆದಿದೆ. (ಈ ಎರಡೂ ಪತ್ರಗಳು ‘ಪ್ರಜಾವಾಣಿ’ಗೆ ಲಭಿಸಿವೆ). ಹೀಗಾಗಿ ಅತ್ತಿಂದಿತ್ತ ಓಡಾಡುವ ಚೆಂಡಿನ ಚೆಂದದ ಆಟವನ್ನು ನೋಡಬೇಕಾಗಿದ್ದ ಮೈದಾನದಲ್ಲಿ ಇದೀಗ ಧ್ವಜಸ್ತಂಭವೇ ಫುಟ್‌ಬಾಲ್‌ ಆಗಿಬಿಟ್ಟಿದೆ.

ADVERTISEMENT

ಪ್ರತಿಷ್ಠೆ–ಅವಮಾನ–ಅನಾಹುತ: ಇಷ್ಟು ಎತ್ತರದ ಧ್ವಜಸ್ತಂಭ ನಿರ್ಮಿಸಿದವರಿಗೆ ಇದು ಪ್ರತಿಷ್ಠೆಯ ವಿಷಯವಾಗಿತ್ತು, ಆದರೆ ಧ್ವಜಸ್ತಂಭ ನೋಡಿ ಜನ ಮತ ಹಾಕಲಿಲ್ಲ. ಮೈದಾನದ ಮಧ್ಯ ಭಾಗದಲ್ಲೇ ಕಂಬ ಬಂದು ಕೀರ್ತಿ ಪತಾಕೆಯೇನೋ ಹಾರಿತು, ಆದರೆ ಬೃಹತ್ ಸಭೆ, ಸಮಾರಂಭಗಳಿಗೆ, ಆಟೋಟಗಳಿಗೆ ಅಡ್ಡಿ ಉಂಟಾಯಿತು. ಕಳೆದ ಮೂರು ವರ್ಷಗಳಿಂದ ಇದೆಲ್ಲವನ್ನೂ ನೋಡುತ್ತ ಬಂದಿರುವ ಜನರು  ಇದೀಗ ನಿರ್ವಹಣೆ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ನಿರ್ವಹಣೆ ಇಲ್ಲದೆ ಧ್ವಜ ಕುಸಿದು ಬಿದ್ದರೆ ಅವಮಾನ, ಧ್ವಜಸ್ತಂಭವೇ ಬಿದ್ದರೆ ಅವಮಾನದ ಜತಗೆ ಅನಾಹುತವೂ ನಿಶ್ಚಿತ ಎಂದು ಜನ ಎಚ್ಚರಿಸುತ್ತಿದ್ದಾರೆ.

‘ಹಲವು ನಾಗರಿಕರು ಈ ಧ್ವಜಸ್ತಂಭವನ್ನು ಮೈದಾನದ ಒಂದು ಬದಿಗೆ ಸರಿಸಿಬಿಡಬೇಕು ಎಂದು ಹೇಳುತ್ತಿದ್ದಾರೆ, ಅದು ಸಾಧ್ಯವೇ ಇಲ್ಲ, ಧ್ವಜ ಏರಿಸುವಾಗ ಬೃಹತ್ ರಾಷ್ಟ್ರಧ್ವಜ ಸುತ್ತಮುತ್ತಲಿನ ಬೇಲಿ, ಕಂಬಗಳಿಗೆ ಸಿಲುಕಿ ಹರಿದು ಹೋಗುತ್ತದೆ. ನಿರ್ವಹಣೆ ಕಷ್ಟ ಎಂದಾದರೆ ಧ್ವಜಸ್ತಂಭವನ್ನು ತೆರವುಗೊಳಿಸುವುದೊಂದೇ ದಾರಿ. ಪ್ರತಿಷ್ಠೆಗೆ ಜೋತುಬಿದ್ದರೆ ನಿರ್ವಹಣೆಯ ಭಾರವನ್ನು ಯಾರಾದರೂ ಹೊರಲೇಬೇಕಾಗುತ್ತದೆ’  ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಹೊಸಪೇಟೆ ಜಿಲ್ಲಾ ಕ್ರೀಡಾಂಗಣದ ಧ್ವಜಸ್ತಂಭದಲ್ಲಿ ಹಾರಾಡಿದ ತ್ರಿವರ್ಣ ಧ್ವಜದ ಸಂಗ್ರಹ ಚಿತ್ರ

ವರ್ಷಕ್ಕೆ  ನಾಲ್ಕು ಬಾರಿ ಧ್ವಜಾರೋಹಣ ಅವಕಾಶ ನೋಡಲು ಚೆಂದ, ಆದರೆ ಆಗಾಗ ಮುಜುಗರ ಜತೆಗೆ ನಡೆಯುತ್ತದೆ ಸಣ್ಣ ಸ್ತಂಭದಲ್ಲೂ ಧ್ವಜಾರೋಹಣ

ಲೋಕೋಪಯೋಗಿ ಇಲಾಖೆಗೆ ನಿರ್ಮಾಣಕಾರ್ಯದ ಹೊಣೆಗಾರಿಕೆ ಇರುತ್ತದೆಯೇ ಹೊರತು ನಿರ್ವಹಣೆಯದ್ದಲ್ಲ. ನಗರಸಭೆಯಲ್ಲೂ ಅರ್ಹ ಎಂಜಿನಿಯರ್‌ಗಳೇ ಇದ್ದಾರೆ ಹೊಣೆ ವರ್ಗಾವಣೆ ಸಲ್ಲ
ಟಿ.ದೇವದಾಸ್ ಇಇ ಪಿಡಬ್ಲ್ಯುಡಿ ಇಲಾಖೆ
ಧ್ವಜಸ್ತಂಭ ನಿರ್ವಹಣೆ ಕಷ್ಟವಿದೆ. ನಗರಸಭೆ ಸದಸ್ಯರ ಒಮ್ಮತದ ತೀರ್ಮಾನದಂತೆ ಈ ಹಿಂದೆ ನಿರ್ವಹಿಸಿದ ಅನುಭವ ಇರುವ ಪಿಡಬ್ಲ್ಯುಡಿಗೆ ಧ್ವಜಸ್ತಂಭದ ನಿರ್ವಹಣೆ ವಹಿಸಲು ಕೋರಿ ಪತ್ರ ಬರೆಯಲಾಗಿದೆ
ಎ.ಶಿವಕುಮಾರ್‌ ಆಯುಕ್ತ ನಗರಸಭೆ

ಧ್ವಜಸ್ತಂಭ ಎಂಬ ಬಿಳಿಯಾನೆ 2022–23ನೇ ಸಾಲಿನ ಪ್ರವಾಸೋದ್ಯಮ ಇಲಾಖೆ ಅನುದಾನದಡಿಯಲ್ಲಿ (8443–ಠೇವಣಿ ವಂತಿಗೆ) ₹5.17 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಧ್ವಜಸ್ತಂಭ ಈಗ ನಿಜಕ್ಕೂ ಜಿಲ್ಲಾಡಳಿತಕ್ಕೆ ಬಿಳಿಯಾನೆಯೇ ಆಗಿಬಿಟ್ಟಿದೆ. ಎತ್ತರದ ಸ್ತಂಭಕ್ಕೆ ತಕ್ಕಂತೆಯೇ ಬೃಹತ್‌ ರಾಷ್ಟ್ರಧ್ವಜವನ್ನೂ ಹಾರಿಸಬೇಕು ಅದಿಲ್ಲದಿದ್ದರೆ ಸ್ಟಾಂಪ್‌ನಂತೆ ಕಾಣಿಸುತ್ತದೆ (2023ರ ಆಗಸ್ಟ್ 15ರಂದು ಹೀಗೆ ಚಿಕ್ಕ ಧ್ವಜ ಹಾರಾಡಿತ್ತು). ವರ್ಷಕ್ಕೆ ಇಲ್ಲಿ ನಾಲ್ಕು ಬಾರಿ ಧ್ವಜ ಹಾರಿಸುವುದು ಇರುತ್ತದೆ (ಜ.26 ಆ.15. ಸೆ.17 ಮತ್ತು ನ.1). ಅದಕ್ಕೆ ಬೆಂಗಳೂರಿನಿಂದಲೇ ತಂತ್ರಜ್ಞರು ಬರಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಬೃಹತ್ ಧ್ವಜದತ್ತ ಉಸಾಬರಿಗೇ ಹೋಗದೆ ಚಿಕ್ಕ ಧ್ಜಜಸ್ತಂಭದಲ್ಲೇ ಧ್ವಜಾರೋಹಣ ನಡೆಸಿದ್ದೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.