ADVERTISEMENT

ವಿಜಯನಗರ: ಕಳವು ಪ್ರಕರಣ ಭೇದಿಸಿದ ಪೊಲೀಸರು, ₹23.94 ಲಕ್ಷ ಮೌಲ್ಯದ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 12:08 IST
Last Updated 10 ನವೆಂಬರ್ 2021, 12:08 IST
   

ಹೊಸಪೇಟೆ (ವಿಜಯನಗರ): ಮೂರು ವಾರಗಳಲ್ಲಿ ಮನೆ ಕಳವು ಪ್ರಕರಣ ಭೇದಿಸಿರುವ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಬಾಲಕ ಸೇರಿದಂತೆ ಆರು ಜನ ಆರೋಪಿಗಳು ಹಾಗೂ ₹23.94 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

₹20.29 ಲಕ್ಷ ಮೌಲ್ಯದ 508 ಗ್ರಾಂ ಚಿನ್ನಾಭರಣ, ₹1.89 ಲಕ್ಷದ 3.797 ಕೆ.ಜಿ. ಬೆಳ್ಳಿ ಆಭರಣ, ₹1.75 ಲಕ್ಷ ಬೆಲೆಬಾಳುವ ಎರಡು ರ್‍ಯಾಡೋ ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಬಿ.ಟಿ.ಆರ್‌. ನಗರದ ಆನಂದ ಮುದಿಯಪ್ಪ, ಎರೆಬೈಲಿನ ತಾಯಪ್ಪ ಗಾಳೆಪ್ಪ, ನೇಕಾರ ಕಾಲೊನಿಯ ಕೆ. ಮಂಜುನಾಥ ಶಿವಕುಮಾರ, ತುಮಕೂರಿನ ಸಿದ್ದರಾಜು ರಾಮಾಚಾರಿ ಹಾಗೂ ನಿತಿನ್‌ ರಾಜಣ್ಣ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಲ್ಲ ಐದು ಜನ ಆರೋಪಿಗಳ ವಯಸ್ಸು 19. ಸಿದ್ದರಾಜು ಈ ಹಿಂದೆಯೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಬಾಲಕನನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ವಿವೇಕಾನಂದ ನಗರದ ನಿವಾಸಿ ರಾಘವೇಂದ್ರ ಬಿ.ಎಂ. ನಾಯ್ಕ ಎಂಬುವರು ಅವರ ತಾಯಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ತೆರಳಿದ್ದರು. ಅ. 5ರಿಂದ 25ರ ವರೆಗೆ ಮನೆ ಬೀಗ ಹಾಕಿಕೊಂಡು ಹೋಗಿದ್ದರು. ಇದನ್ನು ಗಮನಿಸಿದ ಕಳ್ಳರು ಅ. 24ರ ತಡರಾತ್ರಿ ರಾಡ್‌ನಿಂದ ಮನೆಯ ಬೀಗ ಮುರಿದು ಕಳವು ಮಾಡಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್ಪಿ ವಿಶ್ವನಾಥ್‌ ರಾವ್‌ ಕುಲಕರ್ಣಿ, ಗ್ರಾಮೀಣ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಸಿ. ಮೇಟಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಮೂರು ವಾರಗಳಲ್ಲಿ ಪ್ರಕರಣ ಭೇದಿಸಿ, ಆರು ಜನ ಹಾಗೂ ಚಿನ್ನಾಭರಣಗಳನ್ನು ಬುಧವಾರ ವಶಪಡಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

ಗ್ರಾಮೀಣ ಠಾಣೆಯ ಸಿಬ್ಬಂದಿ ಬಿ. ರಾಘವೇಂದ್ರ, ಸುಭಾಷ್‌, ಎ. ಕೊಟ್ರೇಶ, ಪ್ರಕಾಶ, ರಮೇಶ, ಜೆ. ಕೊಟ್ರೇಶ, ಅಡಿವೆಪ್ಪ, ಬಿ. ನಾಗರಾಜ, ಚಂದ್ರಪ್ಪ, ವಿ. ನಾಗರಾಜ, ತಿಪ್ಪೇಶ, ಮಲ್ಲಿಕಾರ್ಜುನ, ಚಾಲಕ ನಾಗರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.