ಹೂವಿನಹಡಗಲಿ: ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಪಟ್ಟಣಕ್ಕೆ ಶನಿವಾರ ಭೇಟಿ ನೀಡಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯ ವೀಕ್ಷಿಸಿದರು.
ಪಟ್ಟಣದ 9ನೇ ವಾರ್ಡಿನ ಚರ್ಚ್ ಮುಂಭಾಗದ ಪ್ರದೇಶ, ಇಸ್ಲಾಂ ಪೇಟೆ, ಹೊಸ ಹರಿಜನ ಕಾಲೊನಿಯ ಮನೆಗಳಿಗೆ ಭೇಟಿ, ಗಣತಿದಾರರು ಮನೆಗಳಿಗೆ ಬಂದು ಮಾಹಿತಿ ದಾಖಲಿಸಿದ್ದಾರೆಯೇ ಎಂದು ನಿವಾಸಿಗಳನ್ನು ವಿಚಾರಿಸಿದರು. ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋದವರನ್ನು ಸಂಪರ್ಕಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಕ್ಯಾಂಟೀನ್‌ನಲ್ಲಿ ಕುಳಿತಿದ್ದ ಹಿರಿಯ ನಾಗರಿಕರ ಬಳಿ ಜಿಲ್ಲಾಧಿಕಾರಿ ತೆರಳಿ, ಗಣತಿದಾರರು ನಿಮ್ಮಲ್ಲಿಗೆ ಬಂದಾಗ ಮಾಹಿತಿ ನೀಡಿದ್ದೀರಾ? ಎಂದು ಮಾಹಿತಿ ಪಡೆದರು.
‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ವಿಜಯನಗರ ಜಿಲ್ಲೆಯ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ಸಮೀಕ್ಷೆಯಲ್ಲಿ ಶೇ 81.64ರಷ್ಟು ಸಾಧನೆ ಮಾಡುವ ಮೂಲಕ ಹೂವಿನಹಡಗಲಿ ತಾಲ್ಲೂಕು ಮುಂಚೂಣಿಯಲ್ಲಿದೆ. ಹೊಸಪೇಟೆ ತಾಲ್ಲೂಕು– ಶೇ 49.54, ಹಗರಿಬೊಮ್ಮನಹಳ್ಳಿ– ಶೇ 77.26, ಕೂಡ್ಲಿಗಿ– ಶೇ 78.92, ಹರಪನಹಳ್ಳಿ– ಶೇ 77.17. ಕೊಟ್ಟೂರು– ಶೇ 71.50 ಸೇರಿದಂತೆ ಜಿಲ್ಲೆಯಲ್ಲಿ ಶೇ 69.27ರಷ್ಟು ಸಮೀಕ್ಷೆ ಆಗಿದೆ. ಹೊಸಪೇಟೆಯಲ್ಲಿ ಗಣತಿಯ ವೇಗ ಹೆಚ್ಚಿಸಲು 143 ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಿದ್ದೇವೆ. ಬಿಟ್ಟು ಹೋಗಿರುವ ಕುಟುಂಬಗಳ ಸಮೀಕ್ಷೆಗಾಗಿ ಅ.7ರ ನಂತರ ಮೇಲ್ವಿಚಾರಕರನ್ನು ನೇಮಿಸಲಾಗುವುದು’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಜಿ.ಸಂತೋಷಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರ್, ಪುರಸಭೆ ಮುಖ್ಯಾಧಿಕಾರಿ ಎಚ್.ಇಮಾಮ್ ಸಾಬ್, ಸಿಡಿಪಿಒ ಬಿ.ರಾಮನಗೌಡ, ಬಿಸಿಎಂ ವಿಸ್ತರಣಾಧಿಕಾರಿ ಬಿ.ರಮೇಶ, ಪುರಸಭೆ ಸಮುದಾಯ ಸಂಘಟಕ ಮೈಲಾರಪ್ಪ ಇದ್ದರು.
ತಾಲ್ಲೂಕಿನಲ್ಲಿ ಮ್ಯಾಪಿಂಗ್ ಆಗದ ಮಕರಬ್ಬಿ ಚಿಕ್ಕ ಬನ್ನಿಮಟ್ಟಿ ನಂದಿಗಾವಿ ಬ್ಯಾಲಹುಣ್ಸಿ ಕೋಟಿಹಾಳ 63-ತಿಮಲಾಪುರ ಗ್ರಾಮಗಳಲ್ಲಿ ಸಮೀಕ್ಷೆಗೆ ಅಡಚಣೆ ಉಂಟಾಗಿದ್ದು ಕೇಂದ್ರ ಕಚೇರಿಯವರು ಸರಿಪಡಿಸುವರು.–ಕವಿತಾ ಎಸ್. ಮನ್ನಿಕೇರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.