ಹೊಸಪೇಟೆ (ವಿಜಯನಗರ): ‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಜನನ– ಮರಣ ನೋಂದಣಿ ಪ್ರಕ್ರಿಯೆ ವಿಳಂಬವಾಗಿ, ಪ್ರಮಾಣ ಪತ್ರಕ್ಕಾಗಿ ಅಲೆದಾಡಿಸುತ್ತಿರುವುದು ಕಂಡು ಬಂದಲ್ಲಿ, ಅದಕ್ಕೆ ಆಯಾ ತಾಲ್ಲೂಕು ವೈದ್ಯಾಧಿಕಾರಿಗಳೇ ಹೊಣೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷಿತ ಆಪರೇಟರ್ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ಸರ್ಕಾರದ ಮಾರ್ಗಸೂಚಿಯಂತೆ 21 ದಿನದೊಳಗೆ ಜನನ, ಮರಣ ಪ್ರಮಾಣ ಪತ್ರಗಳು ನೀಡಬೇಕು. ಆದರೆ ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ ಜನನ 1,332, ಮರಣ 852 ಒಟ್ಟು 2,184 ನೋಂದಾಣಿ ವಿಳಂಬವಾಗಿವೆ. ಅದರಲ್ಲಿ ಹೊಸಪೇಟೆ 1,279, ಹರಪನಹಳ್ಳಿ 251, ಹಗರಿಬೊಮ್ಮನಹಳ್ಳಿ 150, ಹೂವಿನಹಡಗಲಿ 116, ಕೊಟ್ಟೂರು 110, ಕೂಡ್ಲಿಗಿ 109, ಕಮಲಾಪುರ 88, ಮರಿಯಮ್ಮನಹಳ್ಳಿ 81 ನೋಂದಣಿ ವಿಳಂಬವಾಗಿದೆ’ ಎಂದು ಮಾಹಿತಿ ನೀಡಿದರು.
ನಿಗದಿತ ಕಾಲಾವಧಿ ಮೀರಿ ವಿಳಂಬ ಪ್ರಕ್ರಿಯೆ ಯಾಕೆ ಎಂದು ಪ್ರಶ್ನಿಸಿದ ಅವರು, ವಿನಾಕಾರಣ ನೆಪ ಹೇಳಿ ಕುಟುಂಬಸ್ಥರನ್ನು ಅಲೆದಾಡಿಸುತ್ತಿರುವ ದೂರುಗಳು ಬಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಸ್ಚಾರ್ಜ್ ವೇಳೆಯಲ್ಲಿ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ನೀಡಲಾಗುತ್ತಿದ್ದು, ಪಿಡಿಒಗಳು ನಿಗಾವಹಿಸಿ ಪ್ರಮಾಣ ಪತ್ರ ವಿತರಣೆ ಮಾಡಬೇಕೆಂದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ.ಪತ್ರಿಬಸಪ್ಪ, ಜಂಟಿ ಕೃಷಿ ನಿರ್ದೇಶಕ ಜಿ.ಟಿ.ಮಂಜುನಾಥ, ಉಪ ಕೃಷಿ ನಿರ್ದೇಶಕ ನಯೀಮ್ ಪಾಷಾ, ತೋಟಗಾರಿಕೆ ಉಪನಿರ್ದೇಶಕ ಪಿ.ಜಿ.ಚಿದಾನಂದಪ್ಪ, ರೇಷ್ಮೇ ಉಪನಿರ್ದೇಶಕ ವಿ.ಸುಧೀರ್, ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ.ರಾಧಿಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.