ADVERTISEMENT

ವಿಜಯನಗರದಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 8:34 IST
Last Updated 17 ಮಾರ್ಚ್ 2022, 8:34 IST
ಮಾತಾ ಮಂಜಮ್ಮ ಜೋಗತಿ
ಮಾತಾ ಮಂಜಮ್ಮ ಜೋಗತಿ    

ಹೊಸಪೇಟೆ (ವಿಜಯನಗರ): ‘ಕರ್ನಾಟಕ ಜಾನಪದ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಈ ಸಲ ನೂತನ ವಿಜಯನಗರ ಜಿಲ್ಲೆಯಲ್ಲಿ ನಡೆಯಲಿದೆ’ ಎಂದು ಅಕಾಡೆಮಿಯ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ತಿಳಿಸಿದರು.

ಎರಡು ದಿನಗಳ ಕಾರ್ಯಕ್ರಮಕ್ಕೆ ನಗರದ ಸಿದ್ಧಿಪ್ರಿಯಾ ಕಲ್ಯಾಣ ಮಂಟಪ ಆಯ್ಕೆ ಮಾಡಲಾಗಿದೆ. ಏ. 9ರಂದು ಜಾನಪದ ಸಂಭ್ರಮ, ಏ. 10ರಂದು ಜಾನಪದ ಗೀತ ಗಾಯನ, ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ ಎಂದು ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಇಬ್ಬರು ವಿದ್ವಾಂಸರು, 30 ಜನ ಸಾಧಕರಿಗೆ ಪ್ರಶಸ್ತಿ, ಮೂರು ಪುಸ್ತಕ ಬಹುಮಾನ ಪ್ರದಾನ ಮಾಡಲಾಗುವುದು. ವಿದ್ವಾಂಸರಿಗೆ ತಲಾ ₹50,000, ಸಾಧಕರು ಮತ್ತು ಪುಸ್ತಕ ಬಹುಮಾನಗಳಿಗೆ ತಲಾ ₹25,000 ನಗದು, ಪ್ರಶಸ್ತಿ ಫಲಕ ಪ್ರದಾನ ಮಾಡಲಾಗುತ್ತದೆ. ತಿಂಗಳ ಹಿಂದೆಯೇ ಅಕಾಡೆಮಿಯಿಂದ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಘೋಷಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಜಾನಪದ ಸಂಭ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಒಂದು ಕಲಾ ತಂಡ ಆಯ್ಕೆ ಮಾಡಲಾಗಿದೆ. ವಿಜಯನಗರದಲ್ಲೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ಹೆಚ್ಚಿನ ಕಲಾ ತಂಡಗಳಿಗೆ ಆದ್ಯತೆ ನೀಡಲಾಗಿದೆ. ಜಾನಪದ ಗೀತ ಗಾಯನಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಮನ್ನಣೆ ಕೊಡಲಾಗಿದೆ ಎಂದು ವಿವರಿಸಿದರು.

ನನ್ನ ತವರು ಜಿಲ್ಲೆ ವಿಜಯನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಅಕಾಡೆಮಿಯ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದ್ದರು. ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವರೂ ಆದ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಅಕಾಡೆಮಿಯ ರಿಜಿಸ್ಟ್ರಾರ್‌ ನಮ್ರತಾ, ಸೂಪರಿಟೆಂಡೆಂಟ್ ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.