ADVERTISEMENT

ವಿಜಯನಗರ: ಗೆಜ್ಜಲಮಂಟಪ ಬಳಿ ದಟ್ಟಣೆಯ ಸಂಕಟ

ಪಾರ್ಕಿಂಗ್ ಶುಲ್ಕ ಆರಂಭ, ಸೌಲಭ್ಯ ಶೂನ್ಯ

ಎಂ.ಜಿ.ಬಾಲಕೃಷ್ಣ
Published 5 ಅಕ್ಟೋಬರ್ 2025, 4:24 IST
Last Updated 5 ಅಕ್ಟೋಬರ್ 2025, 4:24 IST
<div class="paragraphs"><p>ಹೊಸಪೇಟೆ ತಾಲ್ಲೂಕಿನ ಹಂಪಿಯ ವಿಜಯವಿಠ್ಠಲ ದೇವಸ್ಥಾನದ ವಾಹನ ನಿಲುಗಡೆ ಸ್ಥಳದ ಬಳಿ ಶನಿವಾರ ಕಾಣಿಸಿದ ವಾಹನ ದಟ್ಟಣೆ</p></div>

ಹೊಸಪೇಟೆ ತಾಲ್ಲೂಕಿನ ಹಂಪಿಯ ವಿಜಯವಿಠ್ಠಲ ದೇವಸ್ಥಾನದ ವಾಹನ ನಿಲುಗಡೆ ಸ್ಥಳದ ಬಳಿ ಶನಿವಾರ ಕಾಣಿಸಿದ ವಾಹನ ದಟ್ಟಣೆ

   

ಪ್ರಜಾವಾಣಿ ಚಿತ್ರ: ಲವ ಕೆ.

ಹೊಸಪೇಟೆ (ವಿಜಯನಗರ): ಹಂಪಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವ ಋತು ಆರಂಭವಾಗಿದ್ದು, ವಿಜಯ ವಿಠ್ಠಲ ದೇವಸ್ಥಾನದ ವಾಹನ ನಿಲುಗಡೆ ಸ್ಥಳ ಗೆಜ್ಜಲಮಂಟಪ ಸುತ್ತಮತ್ತ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಚಕಾರ ಒದಗಿ ಪ್ರವಾಸಿಗರಿಗೆ ಭಾರಿ ಕಿರಿಕಿರಿ ಎದುರಾಗಿದೆ.

ADVERTISEMENT

ಗೆಜ್ಜಲಮಂಟಪದ ಪಾರ್ಕಿಂಗ್ ಜಾಗದಲ್ಲಿ ಮೂರು ದಿನಗಳಿಂದ ಪಾರ್ಕಿಂಗ್ ಶುಲ್ಕ ಆರಂಭವಾಗಿದೆ. ಒಂದು ಕಾರಿಗೆ ₹30, ಬಸ್‌ಗೆ ₹60 ಶುಲ್ಕ ಪಡೆಯಲಾಗುತ್ತಿದೆ. ಆದರೆ ಸ್ಥಳದಲ್ಲಿನ ಹೊಂಡ, ಗುಂಡಿಗೆ ಮುಕ್ತಿ ಸಿಕ್ಕಿಲ್ಲ. ಇದೇ ವೇಳೆ ಮುಖ್ಯ ದ್ವಾರದ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಇನ್ನಿಲ್ಲದ ಕಂಟಕ ಎದುರಾಗಿದೆ.

‘ಇಲ್ಲಿ ರಸ್ತೆ ಕಿರಿದಾಗಿದೆ, ಅಲ್ಲೇ ಆಟೊಗಳು ಸಾಲಾಗಿ ನಿಂತಿರುತ್ತವೆ, ಅಂಗಡಿಗಳೂ ಇವೆ, ಅವುಗಳ ಮುಂದೆಯೇ ಆಟೊಗಳು ಗ್ರಾಹಕರನ್ನು ಇಳಿಸಿ ಮತ್ತೆ ಅವರು ಬರುವ ತನಕ ಅಲ್ಲೇ ನಿಂತಿರುತ್ತವೆ. ಕಿರಿದಾದ ಜಾಗದಲ್ಲಿ ಪ್ರವಾಸಿಗರ ವಾಹನಗಳು ಮುಂದಕ್ಕೆ ಸಾಗುವುದು ಕಷ್ಟವಾಗುತ್ತಿದೆ. ಶನಿವಾರ ಬಹಳ ಹೊತ್ತು ಇಂತಹ ಪರಿಸ್ಥಿತಿ ಹಲವು ಪ್ರವಾಸಿಗರಿಗೆ ಎದುರಾಯಿತು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮೂಲಗಳು ತಿಳಿಸಿವೆ.

ವಿಶೇಷವೆಂದರೆ ಎಎಸ್‌ಐ ವತಿಯಿಂದಲೇ ಪಾರ್ಕಿಂಗ್ ಶುಲ್ಕ ಆಕರಿಕೆಗೆ ಗುತ್ತಿಗೆ ನೀಡಲಾಗಿದೆ. ಸೌಲಭ್ಯ ಏಕೆ ನೀಡಿಲ್ಲ ಎಂದು ಕೇಳಿದರೆ, ಇನ್ನು ಕೆಲವೇ ದಿನಗಳಲ್ಲಿ ಗ್ರಾವೆಲ್‌ ಹಾಕಿ ಪಾರ್ಕಿಂಗ್ ಸ್ಥಳ ಸಮತಟ್ಟುಗೊಳಿಸುವ ಭರವಸೆ ನೀಡಿದೆ. ಆದರೆ ಗೇಟ್ ಹೊರಗಡೆಯ ವಾಹನ ದಟ್ಟಣೆ ಸಮಸ್ಯೆಗೆ ಸದ್ಯಕ್ಕೆ ಯಾರಿಂದಲೂ ಉತ್ತರ ಇಲ್ಲ.

‘ಆಟೊಗಳು ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲುತ್ತವೆ, ಅವುಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳ ಇಲ್ಲ. ಈ ಭಾಗದಲ್ಲಿ ಇದೊಂದು ಸಮಸ್ಯೆ ಇದೆ. ಬದಲಿ ಪಾರ್ಕಿಂಗ್ ಸ್ಥಳ ಖರೀದಿಸಿ ವ್ಯವಸ್ಥೆ ಮಾಡುವ ಕೆಲಸವನ್ನು ಎಎಸ್‌ಐ, ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರಗಳು (ಹವಾಮ) ಮಾಡಬೇಕಿದೆ. ಹೀಗಿದ್ದರೂ ಸದ್ಯಕ್ಕೆ ಪೊಲೀಸರನ್ನು ನಿಯೋಜಿಸಿ ಸಂಚಾರ ದಟ್ಟಣೆ ನಿವಾರಿಸುವ ಪ್ರಯತ್ನ ನಡೆದಿದೆ. ಮೈಸೂರು ದಸರಾ, ಕೊಪ್ಪಳಕ್ಕೆ ಸಿಎಂ ಭೇಟಿ ಕಾರಣ ಹಲವು ಪೊಲೀಸ್ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಲಾಗಿದೆ. ಕೆಲವೇ ದಿನಗಳಲ್ಲಿ ಮತ್ತೆ ಪ್ರವಾಸಿಗರಿಗೆ ತೊಂದರೆ ಆಗದ ರೀತಿಯಲ್ಲಿ ಪೊಲೀಸರಿಂದ ಸಂಚಾರ ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್‌ಪಿ ಟಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿವೇಶನ ಖರೀದಿ ಅನಿವಾರ್ಯ’

‘ಗೆಜ್ಜಲಮಂಟಪ ಸಮೀಪ ರಸ್ತೆಯ ಇನ್ನೊಂದು ಬದಿಯಲ್ಲಿ ಖಾಸಗಿಯವರಿಗೆ ಸೇರಿದ 6 ಎಕರೆ ನಿವೇಶ ಇದೆ. ಇದನ್ನು ಸ್ವಾಧೀನಪಡಿಸಿಕೊಂಡು ಪಾರ್ಕಿಂಗ್ ಸೌಲಭ್ಯ ಕಲ್ಪಿಸಿದರೆ ಬಹಳಷ್ಟು ಅನುಕೂಲ ಆಗಲಿದೆ. ಮುಂದಿನ ಸಭೆಯಲ್ಲಿ ಈ ನಿವೇಶನ ಸ್ವಾಧೀನ ಕುರಿತು ಜಿಲ್ಲಾಡಳಿತದ ಮುಂದೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ‘ಹವಾಮ’ ಆಯುಕ್ತ ರಮೇಶ್‌ ವಟಗಲ್ ಹೇಳಿದ್ದಾರೆ. ಈ ಸ್ಥಳ ಕೇಳಿದ್ದೇವೆ ಆದರೆ ಜಮೀನಿನ ಮಾಲೀಕರು ಅದನ್ನು ಕೊಡಲು ಒಪ್ಪುತ್ತಿಲ್ಲ ಎಂದು ಎಎಸ್‌ಐ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.