ADVERTISEMENT

ವಿಜಯನಗರವೆಂದರೆ ಬರೀ ಹಂಪಿಯಲ್ಲ: ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌

ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರಿಗೆ ತಿಳಿಸಬೇಕೆಂದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 13:13 IST
Last Updated 19 ಜುಲೈ 2022, 13:13 IST
ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ.
ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ.   

ಹೊಸಪೇಟೆ (ವಿಜಯನಗರ): ‘ವಿಜಯನಗರ ಜಿಲ್ಲೆಯೆಂದರೆ ಬರೀ ಹಂಪಿಯಷ್ಟೇ ಅಲ್ಲ. ಅನೇಕ ಪ್ರಾಕೃತಿಕ, ವನ್ಯಜೀವಿಗಳ ನೆಲೆಬೀಡಾಗಿರುವ ಜಿಲ್ಲೆ. ಅದರ ಬಗ್ಗೆಯೂ ಪ್ರವಾಸಿಗರಿಗೆ ಪ್ರವಾಸಿ ಮಾರ್ಗದರ್ಶಿಗಳು ತಿಳಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ತಿಳಿಸಿದರು.

ಮಂಗಳವಾರ ನಗರದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದರೋಜಿ ಕರಡಿ ಧಾಮ, ನೀರುನಾಯಿ ಸಂರಕ್ಷಿತ ಪ್ರದೇಶ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ಗುಡೇಕೋಟೆ ಕರಡಿಧಾಮ, ಅಂಕಸಮುದ್ರ ಪಕ್ಷಿಧಾಮ ಸೇರಿದಂತೆ ಹಲವು ಸ್ಥಳಗಳಿವೆ. ಅವುಗಳ ಬಗ್ಗೆಯೂ ತಿಳಿಸಬೇಕು. ವನ್ಯಜೀವಿಗಳಿರುವ ಸ್ಥಳಗಳ ಬಗ್ಗೆ ತಿಳಿಸುವುದಕ್ಕಾಗಿಯೇ ಪ್ರವಾಸಿ ಮಾರ್ಗದರ್ಶಿಗಳಿಗೆ ಕಾರ್ಯಾಗಾರ ಏರ್ಪಡಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಮಾಡಿಸಲಾಗುವುದು ಎಂದು ಹೇಳಿದರು.

ಪ್ರವಾಸಿ ಮಾರ್ಗದರ್ಶಿಗಳಿಗೆ ಗುರುತಿನ ಚೀಟಿ ವಿತರಣೆ ಸೇರಿದಂತೆ ಅವರ ಇತರೆ ಸಮಸ್ಯೆಗಳನ್ನು ಆಲಿಸುವ ಸಂಬಂಧ ಪ್ರತ್ಯೇಕ ಸಭೆ ಕರೆದು ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಆಗಸ್ಟ್ 15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ:

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಬೃಹತ್‌ ಸಾಂಸ್ಕೃತಿಕ ಕಾರ್ಯಕ್ರಮ ಆಗಸ್ಟ್ 15ರಂದು ಸಂಜೆ 6ಕ್ಕೆ ನಗರದ ಮುನ್ಸಿಪಲ್‌ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು. ಸ್ವಾತಂತ್ರ್ಯ ಸಂಗ್ರಾಮದ ಕಥನ ಮೆಲುಕು ಹಾಕುವುದು, ಯುವಜನರಲ್ಲಿ ದೇಶಪ್ರೇಮ ಬೆಳೆಸುವ ಉದ್ದೇಶದಿಂದ ವಿಜೃಂಭಣೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ವಿಜಯನಗರ ಜಿಲ್ಲೆಯ ಕೊಡುಗೆಯ ಬಗ್ಗೆಯೂ ಬೆಳಕು ಚೆಲ್ಲಲಾಗುವುದು. ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಅದಕ್ಕೆ ಅನುದಾನ ಒದಗಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಕಳಿಸಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.