ADVERTISEMENT

ವಿಜಯನಗರ | ಸಮೀಕ್ಷೆ; ಅಭಿವೃದ್ಧಿಯ ಅಡಿಗಲ್ಲು: ಶಾಸಕ ಗವಿಯಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:49 IST
Last Updated 24 ಸೆಪ್ಟೆಂಬರ್ 2025, 4:49 IST
ಎಚ್‌.ಆರ್‌.ಗವಿಯಪ್ಪ
ಎಚ್‌.ಆರ್‌.ಗವಿಯಪ್ಪ   

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯು ಅಭಿವೃದ್ಧಿಯ ಅಡಿಗಲ್ಲಾಗಿದೆ. ಸ್ವಯಂ ಅಂದಾಜಿಸಿಕೊಳ್ಳಲು ಒದಗಿರುವ ಈ ಅಪೂರ್ವ ಅವಕಾಶದಿಂದ ಯಾರೂ ತಪ್ಪಿಸಿಕೊಳ್ಳಬಾರದು’ ಎಂದು ಶಾಸಕ ಎಚ್‌.ಆರ್.ಗವಿಯಪ್ಪ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಜಿಲ್ಲಾಮಟ್ಟದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಂದರ್ಭದಲ್ಲೇ ಸಮೀಕ್ಷೆ ನಡೆಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಸ್ವಾತಂತ್ರ್ಯ ಲಭಿಸಿದ ಬಳಿಕ ಆಡಳಿತ, ರಾಷ್ಟ್ರನಿರ್ಮಾಣದ ತುರ್ತು ಕೆಲಸಗಳ ನಡುವೆ ಇದು ಸಾಧ್ಯವಾಗಲಿಲ್ಲ. ಇದೀಗ ಮೊದಲ ಬಾರಿಗೆ ಇಂತಹ ಅವಕಾಶ ದೊರೆತಿದೆ’ ಎಂದರು.

ಬಜೆಟ್‌; ಕ್ರಾಂತಿ ನಿಶ್ಚಿತ

ADVERTISEMENT

‘ಎಲ್ಲಾ ಜಾತಿಗಳಲ್ಲೂ ಬಡವರಿದ್ದಾರೆ. ಅವರ ಸ್ಥಿತಿಗತಿ ತಿಳಿಯುವುದು ಸಮೀಕ್ಷೆಯಿಂದ ಮಾತ್ರ. ಇದು ಜಾತಿ ಸಮೀಕ್ಷೆಯಲ್ಲ, ಜನರ ಸ್ಥಿತಿಗತಿ ತಿಳಿಯುವ ಸಮೀಕ್ಷೆಯಾಗಿದೆ. ಡಿಸೆಂಬರ್ ವೇಳೆಗೆ ಈ ವರದಿ ಸಿದ್ಧವಾಗುವ ಸಾಧ್ಯತೆ ಇದೆ. ಇದನ್ನು ಗಮನಿಸಿ ಮುಂದಿನ ಬಜೆಟ್‌ನಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುವುದು ನಿಶ್ಚಿತ’ ಎಂದು ಹೇಳಿದರು.

‘ಇತ್ತೀಚಿನ ಸಮೀಕ್ಷೆ ಪ್ರಕಾರ ದೇಶದಲ್ಲಿ 9.71 ಲಕ್ಷ ಶ್ರೀಮಂತರಿದ್ದಾರೆ. ರಾಜ್ಯದಲ್ಲಿ 33,000 ಇದ್ದಾರೆ. ಬಹುತೇಕ ಜನ ಬಡತನ ಅಥವಾ ಅರೆ ಸಿರಿವಂತಿಕೆಯ ಸ್ಥಿತಿಯಲ್ಲಿದ್ದಾರೆ. ಅವರ ಜೀವನಮಟ್ಟ ಸುಧಾರಣೆ ಹೇಗೆ ಎಂಬುದನ್ನು ಈ ಸಮೀಕ್ಷೆಯ ಬಳಿಕ ಬರುವ ವರದಿ ಆಧರಿಸಿ ನಿರ್ಧರಿಸಬಹುದು. ಹಾಗಾಗಿ, ಇಸು ಬಡತನ ನಿರ್ಮೂಲನೆಯ ಮೆಟ್ಟಿಲು ಎಂದು ನಿಸ್ಸಂಶಯವಾಗಿ ಹೇಳಬಹುದು’ ಎಂದುನುಡಿದರು.

‘ಮಾಹಿತಿ ಸೋರಿಕೆ ಆಗದು’

‘ಸಮೀಕ್ಷೆ ವೇಳೆ 60 ಪ್ರಶ್ನೆಗಳನ್ನು ಕೇಳುತ್ತಾರೆ. ಎಲ್ಲದಕ್ಕೂ ಉತ್ತರ ನೀಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾತ್ರ ಈ ಸಮೀಕ್ಷೆ ಮಾಡುತ್ತದೆ. ಈ ಮಾಹಿತಿ ಇತರರಿಗೆ ಸೋರಿಕೆ ಆಗುವುದಿಲ್ಲ. ಮೇಲ್ವರ್ಗದಲ್ಲಿನ ತೀರಾ ಬಡವರ ಸ್ಥಿತಿಗತಿ ತಿಳಿಯುವುದು ಹೇಗೆ ಸಾಧ್ಯವೋ ತೀರಾ ತಳವರ್ಗದವರ ಜೀವನದ ಮೇಲೆ ಬೆಳಕು ಚೆಲ್ಲುವುದೂ ಇದರಿಂದ ಸಾಧ್ಯ’ ಎಂದು ಶಾಸಕ ಎಚ್‌.ಆರ್.ಗವಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.