ADVERTISEMENT

ಹೊಸಪೇಟೆ: ಬದುಕಿನ ವೇಗಕ್ಕೆ ರೈಲ್ವೆ ಗೇಟ್‌ ಅಡ್ಡಿ

ಜೀವ ಲೆಕ್ಕಿಸದೇ ಸರಕು ಸಾಗಣೆ ರೈಲುಗಳ ನಡುವೆ ಓಡಾಡುವ ಶಾಲಾ ವಿದ್ಯಾರ್ಥಿಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ನವೆಂಬರ್ 2022, 7:09 IST
Last Updated 20 ನವೆಂಬರ್ 2022, 7:09 IST
ಹೊಸಪೇಟೆಯ 88 ಮುದ್ಲಾಪುರ ಬಳಿ ನಿಂತಿರುವ ಸರಕು ಸಾಗಣೆ ರೈಲುಗಳ ಕೆಳಗಿನಿಂದ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರು
ಹೊಸಪೇಟೆಯ 88 ಮುದ್ಲಾಪುರ ಬಳಿ ನಿಂತಿರುವ ಸರಕು ಸಾಗಣೆ ರೈಲುಗಳ ಕೆಳಗಿನಿಂದ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರು   

ಹೊಸಪೇಟೆ (ವಿಜಯನಗರ): ನಗರಸಭೆಯ 2ನೇ ವಾರ್ಡ್‌ಗೆ ಸೇರಿರುವ 88 ಮುದ್ಲಾಪುರ ಸಮೀಪದ ರೈಲ್ವೆ ಗೇಟ್‌ನಿಂದ ಅನೇಕ ಗ್ರಾಮಸ್ಥರ ಬದುಕಿನ ವೇಗಕ್ಕೆ ತಡೆ ಬಿದ್ದಿದೆ.

ತಾಲ್ಲೂಕಿನ 88 ಮುದ್ಲಾಪುರ, ಬೆಳಗೋಡು, ಕಳ್ಳಿರಾಂಪುರ, ಬಸವನದುರ್ಗ, ನರಸಾಪುರ, ಜಾಹಗಿರದಾರ್‌ ಬಂಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹುಬ್ಬಳ್ಳಿ–ಗುಂತಕಲ್‌ ನಡುವೆ ಸಂಪರ್ಕ ಬೆಸೆಯುವ ರೈಲು ಹಳಿಗಳು ಹಾದು ಹೋಗಿವೆ. ಬಳ್ಳಾರಿ, ಸಂಡೂರು ಸುತ್ತಮುತ್ತ ಅನೇಕ ಉಕ್ಕಿನ ಕೈಗಾರಿಕೆಗಳು ಇರುವುದರಿಂದ ಈ ಭಾಗದಿಂದ ನಿತ್ಯ ಅನೇಕ ಸರಕು ಸಾಗಣೆ ರೈಲು ಸಂಚರಿಸುತ್ತವೆ. ಮುಂಬೈ, ಹೈದರಾಬಾದ್‌, ಹುಬ್ಬಳ್ಳಿ, ವಿಜಯವಾಡ, ಗುಂತಕಲ್‌, ತಿರುಪತಿ ಸೇರಿದಂತೆ ಅನೇಕ ನಗರಗಳಿಗೆ ಸಂಪರ್ಕ ಬೆಸೆಯುವುದರಿಂದ ನಿತ್ಯ ಹಲವು ಪ್ರಯಾಣಿಕರ ರೈಲುಗಳು ಸಂಚರಿಸುತ್ತಿರುತ್ತವೆ.

ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಸಂಚರಿಸುವುದರಿಂದ 88 ಮುದ್ಲಾಪುರ ಬಳಿ ಪದೇ ಪದೇ ರೈಲ್ವೆ ಗೇಟ್‌ ಹಾಕಲಾಗುತ್ತದೆ. ಸಣ್ಣಪುಟ್ಟ ಕೆಲಸಕ್ಕೆ ಗ್ರಾಮಸ್ಥರು ತಡಹೊತ್ತು ಕಾದು ನಿಲ್ಲುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಅನೇಕರು ಸಕಾಲಕ್ಕೆ ಆಸ್ಪತ್ರೆಗೆ ತಲುಪದೇ ಜೀವ ಕಳೆದುಕೊಂಡಿರುವ ನಿದರ್ಶನಗಳಿವೆ. ಅದಕ್ಕೆ ಮತ್ತೊಂದು ತಾಜಾ ಘಟನೆ ಗುರುವಾರ ರಾತ್ರಿ ಹೃದಯಾಘಾತದಿಂದ ಬಸವರಾಜ ಮೃತಪಟ್ಟಿರುವುದು. ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ತಡಹೊತ್ತು ರೈಲ್ವೆ ಗೇಟ್‌ ಹಾಕಿದ್ದೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ಅನೇಕ ವರ್ಷಗಳಿಂದ ಗ್ರಾಮಸ್ಥರು 88 ಮುದ್ಲಾಪುರ ಬಳಿ ರೈಲ್ವೆ ಅಂಡರ್‌ಪಾಸ್‌ ನಿರ್ಮಿಸಬೇಕೆಂದು ಆಗ್ರಹಿಸುತ್ತಲೇ ಬಂದಿದ್ದಾರೆ. ಈ ವಾರ್ಡ್‌ ಸದಸ್ಯ ಜೀವರತ್ನಂ, ಸಂಸದ ವೈ. ದೇವೇಂದ್ರಪ್ಪ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಸೇರಿದಂತೆ ಹಲವರು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಇದುವರೆಗೆ ಸ್ಪಂದಿಸಿಲ್ಲ.

ರೈಲ್ವೆ ಉದ್ಯೋಗಿ ಸಾವು:

ತಾಲ್ಲೂಕಿನ 88 ಮುದ್ಲಾಪುರದ ನಿವಾಸಿ, ರೈಲ್ವೆ ಇಲಾಖೆಯ ಉದ್ಯೋಗಿ ಬಸವರಾಜ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

‘ಎದೆ ನೋವು ಕಾಣಿಸಿಕೊಂಡ ನಂತರ ಅವರು ಗ್ರಾಮದಿಂದ ಕುಟುಂಬ ಸದಸ್ಯರೊಂದಿಗೆ ಆಸ್ಪತ್ರೆಗೆ ಹೋಗುತ್ತಿದ್ದರು. 88 ಮುದ್ಲಾಪುರ ಬಳಿ ರೈಲ್ವೆ ಗೇಟ್‌ ಹಾಕಲಾಗಿತ್ತು. ರೈಲುಗಳು ತಡವಾಗಿ ಬಂದದ್ದರಿಂದ ಅವರು ಆಸ್ಪತ್ರೆಗೆ ತಲುಪಲು ವಿಳಂಬವಾಗಿದೆ. ಈ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತುರ್ತು ಚಿಕಿತ್ಸೆಗೆ ಹೋಗುವವರಿಗೆ ಮಾನವೀಯ ನೆಲೆಗಟ್ಟಿನಲ್ಲಿ ರೈಲ್ವೆ ಗೇಟ್‌ ತೆಗೆದು ಅವಕಾಶ ಮಾಡಿಕೊಡಬಹುದಿತ್ತು. ಹೀಗೆ ಮಾಡದ ಕಾರಣ ಅವರು ಜೀವ ಕಳೆದುಕೊಳ್ಳಬೇಕಾಯಿತು. ಅವರ ಸಾವಿಗೆ ರೈಲ್ವೆ ಇಲಾಖೆಯವರೇ ಹೊಣೆಗಾರರು’ ಎಂದು ವಾರ್ಡಿನ ನಗರಸಭೆ ಸದಸ್ಯ ಜೀವರತ್ನಂ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಾಣ ಪಟಕ್ಕಿಟ್ಟು ಓಡಾಡುವ ವಿದ್ಯಾರ್ಥಿಗಳು:

ಗ್ರಾಮಗಳಿಂದ ನಿತ್ಯ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಇದೇ ಭಾಗದಿಂದ ಓಡಾಡುತ್ತಾರೆ. ಕೆಲವೊಮ್ಮೆ ಸರಕು ಸಾಗಣೆ ರೈಲುಗಳು ತಡಹೊತ್ತು ರೈಲ್ವೆ ಗೇಟಿನ ಮಧ್ಯದಲ್ಲಿಯೇ ನಿಂತು ಬಿಡುತ್ತವೆ. ನಡೆದಾಡುವುದು ಕಷ್ಟವಾಗುತ್ತದೆ. ಶಾಲಾ, ಕಾಲೇಜಿಗೆ ವಿಳಂಬವಾಗಬಹುದು ಎಂದು ವಿದ್ಯಾರ್ಥಿಗಳು ನಿಂತ ರೈಲುಗಳ ಮಧ್ಯೆ ಜೀವ ಲೆಕ್ಕಿಸದೇ ಓಡಾಡುತ್ತಾರೆ. ಇದು ನಿತ್ಯದ ಕಾಯಕವಾಗಿದೆ. ಅಂಡರ್‌ಪಾಸ್‌ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಬೇಕೆನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.