ರಾಮನಗರದ ವಿಜಯನಗರ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ರಾಮನಗರ: ‘ನಾಡಿನ ಇತಿಹಾಸವನ್ನು ಕಟ್ಟಿ ಕೊಡುವಲ್ಲಿ ಪ್ರಾಚೀನ ಸ್ಮಾರಕಗಳು ಮತ್ತು ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಸ್ಮಾರಕ ಮತ್ತು ದೇವಾಲಯಗಳನ್ನು ನಿರ್ಮಿಸಿರುವ ನಮ್ಮ ಪೂರ್ವಿಕರ ಶ್ರಮ ಮತ್ತು ಸೃಜನಾತ್ಮಕ ಕಲೆ ಇಂದಿನ ಯುವ ಪೀಳಿಗೆಗೆ ಮಾದರಿ. ಶಿಲ್ಪಕಲೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ’ ಎಂದು ಸಮುದಾಯದ ಮುಖಂಡ ಶ್ರೀನಿವಾಸ ಆಚಾರ್ಯ ಅಭಿಪ್ರಾಯಪಟ್ಟರು.
ನಗರದ ವಿಜಯನಗರ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಶ್ವಕರ್ಮ ಸಮುದಾಯವು ಹಿಂದಿನ ಕಾಲದಿಂದಲೂ ಐದು ಕಸುಬುಗಳನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿವೆ. ಈ ವೃತ್ತಿಗಳು ಮನುಷ್ಯನಿಗೆ ಮೂಲಸೌಕರ್ಯ ಒದಗಿಸಿ ಕೊಡುವ ವೃತ್ತಿಯಾಗಿವೆ. ಪುರಾಣಗಳ ಪ್ರಕಾರ, ವಿಶ್ವಕರ್ಮರು ಪ್ರಪಂಚವನ್ನು ಸೃಷ್ಠಿಸಿದವರು. ರಾಮಾಯಾಣದಲ್ಲಿ ಬರುವ ಶ್ರೀಲಂಕಾ ಹಾಗೂ ಮಹಾಭಾರತದ ಇಂದ್ರಪ್ರಸ್ಥ ಪ್ರದೇಶಗಳಲ್ಲಿ ಭವ್ಯ ಅರಮನೆಯನ್ನು ವಿಶ್ವಕರ್ಮರು ನಿರ್ಮಿಸಿದ್ದರು ಎಂಬುದನ್ನು ನಾವು ಕಾಣಬಹುದು’ ಎಂದರು.
‘ರಾಜ್ಯ ಸರ್ಕಾರವು ವಿಶ್ವಕರ್ಮರ ಕೊಡುಗೆಯನ್ನು ಪರಿಗಣಿಸಿ 2016ರಲ್ಲಿ ವಿಶ್ವಕರ್ಮ ಜಯಂತಿ ಆಚರಣೆಯನ್ನು ಜಾರಿಗೆ ತಂದಿತು. ಇಂದಿನ ಆಧುನಿಕ ಎಂಜಿನಿಯರುಗಳು ಅಸಾಧ್ಯವೆನ್ನುವ ಅನೇಕ ರೀತಿಯ ಕಲೆಯನ್ನು ಬಹಳ ಹಿಂದೆಯೇ ನಮ್ಮ ವಿಶ್ವಕರ್ಮರು ವಿಶ್ವಕ್ಕೆ ಪರಿಚಿಯಿಸಿದರು. ವಿಶ್ವ ಸಂಸ್ಥೆಯ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಅನೇಕ ಕಲ್ಲಿನ ಕೆತ್ತನೆಗಳು ಇಂದಿಗೂ ಪ್ರಪಂಚದ ಅತ್ಯುತ್ತಮ ಕಲೆಗೆ ನಿದರ್ಶನಗಳಾಗಿವೆ’ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ವಿಜಯನಗರದ ಕಾಳಿಕಾಂಬ ದೇವಸ್ಥಾನದವರೆಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ದೇವರ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದೇರ್ಶಕ ರಮೇಶ್‌ಬಾಬು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ ಕೆ.ಜೆ, ತಾಲ್ಲೂಕು ವ್ಶೆದ್ಯಾಧಿಕಾರಿ ಡಾ. ಉಮಾ, ಡಾ. ಮಧುಮತಿ, ಸಾಹಿತಿ ಶೈಲಜಾ, ಸಮುದಾಯದ ಮುಖಂಡರಾದ ಪಿ. ಉಮೇಶ್, ರಾಧಾಕೃಷ್ಣ, ಮುತ್ತುರಾಜ್, ಶ್ರೀನಿವಾಸ್ ತಗಡಾಚಾರ್, ಲಿಂಗಾಚಾರ್, ಅಪ್ಪಾಜಿ ಆಚಾರ್, ಬಸವರಾಜ ಆಚಾರ್ ಹಾಗೂ ಇತರರು ಇದ್ದರು.
ವಿಶ್ವಕರ್ಮರಿಗೆ ಕುಲ ಕಸುಬುಗಳಾಗಿದ್ದ 5 ವೃತ್ತಿ 2016ರಲ್ಲಿ ವಿಶ್ವಕರ್ಮ ಜಯಂತಿ ಜಾರಿಗೆ ಜೂನಿಯರ್ ಕಾಲೇಜು ಆವರಣದಿಂದ ಮೆರವಣಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.