ADVERTISEMENT

'ಮತ ಮಾರಾಟಕ್ಕಿಲ್ಲ ' ಜನಾಂದೋಲನವಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 13:30 IST
Last Updated 30 ಜನವರಿ 2023, 13:30 IST
   

ಹೂವಿನಹಡಗಲಿ (ವಿಜಯನಗರ ) : ಚುನಾವಣೆಗಳಲ್ಲಿ ಹಣ, ಹೆಂಡ, ಇತರೆ ಆಮಿಷಗಳಿಗೆ ಮತ ಮಾರಿಕೊಳ್ಳುವುದಿಲ್ಲ ಎಂದು ಪ್ರತಿ ಪ್ರಜೆಯೂ ಅಭಿಯಾನ ಆರಂಭಿಸಿ, ಶ್ರೇಷ್ಠ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯನ್ನು ರಕ್ಷಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಜಿಬಿಆರ್ ಕಾಲೇಜು ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಣದ ಆಮಿಷ, ಜಾತಿ, ಉಪ ಜಾತಿ, ತೋಳ್ಬಲಕ್ಕೆ ನಮ್ಮ ಮತಗಳು ಮಾರಾಟವಾಗುತ್ತಿರುವುದು ಅಪಾಯದ ಸಂಕೇತ. ಅಂಬೇಡ್ಕರರ ಕೊಡುಗೆಯಿಂದ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆ ಹೊಂದಿದ್ದೇವೆ. ಆದರ್ಶ ಸಂಸದೀಯ ವ್ಯವಸ್ಥೆಯನ್ನು ರಕ್ಷಿಸಿ, ಇನ್ನಷ್ಟು ಶಕ್ತಿಯಾಲಿಯಾಗಿ ಬೆಳೆಸಬೇಕಿದ್ದರೆ ಯುವ ಸಮೂಹ ಜವಾಬ್ದಾರಿ ಅರಿತು ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಆದರ್ಶ ಮೌಲ್ಯಗಳು ಕುಸಿದಿವೆ. ವಿಷ ವರ್ತುಲದಿಂದ ಈ ವಿಷ ವರ್ತುಲದಿಂದ ಹೊರ ಬೇಕಾದರೆ ಈಗಿನ ವ್ಯವಸ್ಥೆಗೆ ಅಮೂಲಾಗ್ರ ಬದಲಾವಣೆ ತರುವುದು ಅವಶ್ಯವಿದೆ ಎಂದು ಪ್ರತಿಪಾದಿಸಿದರು.

ADVERTISEMENT

ನಮ್ಮ ಪೂರ್ವಜರು ಪರಕೀಯರ ಆಳ್ವಿಕೆ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ನಮಗೆಲ್ಲ ರಾಷ್ಟ್ರ ಮೊದಲು ಅನ್ನುವ ಭಾವನೆ ಬಾರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಿನ ಎಲ್ಲ ಸಮಸ್ಯೆಗಳಿಗೆ ವೈರುಧ್ಯಗಳೇ ಕಾರಣವಾಗಿದ್ದು ಹಿಂದೂ ಸನಾತನ ಧರ್ಮ, ಪರಂಪರೆ ಬಗ್ಗೆ ಪ್ರತಿಯೊಬ್ಬರಲ್ಲೂ ಗೌರವ ಬರಬೇಕು. ಆಗ ಮಾತ್ರ ಭಾರತ ವಿಶ್ವಕ್ಕೆ ಮಾರ್ಗದರ್ಶಕ ರಾಷ್ಟ್ರವಾಗುವ ಸಾಮರ್ಥ್ಯ ಬರುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.