ADVERTISEMENT

ವಿಎಸ್‌ಕೆಯು | ಜ್ಞಾನಾರ್ಜನೆಗೆ ಪಠ್ಯಪುಸ್ತಕ ಪೂರಕ: ಪಿ.ನಾಗರಾಜು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:23 IST
Last Updated 5 ಅಕ್ಟೋಬರ್ 2025, 4:23 IST
ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಂಡಿಕೇಟ್ ಸದಸ್ಯ ಅಮರೇಶ್ ನುಗಡೋಣಿ ಅವರು ಸ್ನಾತಕ ಪದವಿಯ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು
ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಂಡಿಕೇಟ್ ಸದಸ್ಯ ಅಮರೇಶ್ ನುಗಡೋಣಿ ಅವರು ಸ್ನಾತಕ ಪದವಿಯ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು   

ಕುರುಗೋಡು: ‘ವಿದ್ವಾಂಸರಿಂದ ರಚಿತವಾದ ವಿಷಯವಾರು ವೈವಿಧ್ಯಮಯ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‌ಕೆಯು) ಆಡಳಿತ ವಿಭಾಗದ ಕುಲಸಚಿವ ಪಿ.ನಾಗರಾಜು ಅವರು ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕನ್ನಡ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ಭಾಷಾ ಪಠ್ಯಪುಸ್ತಕಗಳ ಲೋಕಾರ್ಪಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಸಾಹಿತ್ಯದ ಅಭಿರುಚಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ’ ಎಂದರು.

ADVERTISEMENT

ಸ್ನಾತಕ ಪದವಿಯ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಅಮರೇಶ್ ನುಗಡೋಣಿ, ‘ಕನ್ನಡ ಸಾಹಿತ್ಯದ ಚರಿತ್ರೆಯ ಅರಿವು ಮತ್ತು ಕನ್ನಡ ಭಾಷಾ ಜ್ಞಾನ ನೀಡುವ ಕಾರ್ಯವನ್ನು ಪಠ್ಯಪುಸ್ತಕಗಳು ಮಾಡುತ್ತವೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೇ ಸ್ಪರ್ಧಾತ್ಮಕ ಪ್ರಪಂಚಕ್ಕೆ ಉಪಯುಕ್ತವಾಗುವ ಜ್ಞಾನವನ್ನು ಸಂಪಾದಿಸಬೇಕು’ ಎಂದು ಸಲಹೆ ನೀಡಿದರು.

ಕಲಾ ವಿಭಾಗದ ಡೀನ್ ಮತ್ತು ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ರಾಬರ್ಟ್ ಜೋಸ್ ಮಾತನಾಡಿ, ‘ಇಂದಿನ ಡಿಜಿಟಲ್ ಯುಗದಲ್ಲಿ ಉತ್ತಮ ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸಬೇಕಾದ ಅಗತ್ಯವಿದೆ’ ಎಂದರು.

ಪ್ರಸಾರಾಂಗದ ನಿರ್ದೇಶಕ ತಿಪ್ಪೇರುದ್ರ ಪ್ರಾಸ್ತವಿಕ ಮಾತನಾಡಿದರು. ಪ್ರಾಂಶುಪಾಲರಾದ ಶಾಂತಲಾ ಅಧ್ಯಕ್ಷತೆ ವಹಿಸಿದ್ದರು.

ಪ್ರಸಾರಾಂಗದ ನಿಕಟಪೂರ್ವ ನಿರ್ದೇಶಕ ಅರುಣಕುಮಾರ ಲಗಶೆಟ್ಟಿ, ವಾಣಿಜ್ಯ ಸೌರಭ-2 ಪಠ್ಯಪುಸ್ತಕದ ಸಂಪಾದಕ ಸಿ.ದೇವಣ್ಣ, ರಘುಪ್ರಸಾದ್, ಮೌನೇಶ್ ಬಡಿಗೇರ್, ಕಾಲೇಜಿನ ಅಧ್ಯಾಪಕ ಡಾ.ಚನ್ನಬಸವಯ್ಯ ಎಚ್.ಎಂ., ಮುರಳಿ ಶಂಕರಗೌಡ, ಜ್ಞಾನಪ್ರಸೂನಾಂಭ, ಮಧುಸೂಧನ್, ವೀರಲಿಂಗಪ್ಪ, ಶಶಿಕಾಂತ್, ಮಂಜುನಾಥಸ್ವಾಮಿ ಇದ್ದರು.

ವಿಶ್ವವಿದ್ಯಾಲಯವು ಸಂಪಾದಕರಿಗೆ ಚಿಂತನ-ಮಂಥನ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಉತ್ತಮ ಪಠ್ಯಕ್ರಮ ರೂಪಿಸಬೇಕಿದೆ.
– ಅಮರೇಶ್ ನುಗಡೋಣಿ, ಸಿಂಡಿಕೇಟ್ ಸದಸ್ಯ ವಿಎಸ್‌ಕೆಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.