ತುಂಗಭದ್ರಾ ಜಲಾಶಯ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 1.12 ಲಕ್ಷ ಕ್ಯುಸೆಕ್‌ನಷ್ಟಿದ್ದು, ಅಣೆಕಟ್ಟೆ ಭರ್ತಿಯಾಗಲು ಇನ್ನು ಒಂಭತ್ತು ಅಡಿಯಷ್ಟೇ ಬಾಕಿ ಇದೆ.
1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ 1,624.41 ಅಡಿ ಮಟ್ಟಕ್ಕೆ ನೀರು ತಲುಪಿದೆ. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 74.58 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದೇ ಪ್ರಮಾಣದಲ್ಲಿ ನೀರು ಹರಿದುಬಂದರೆ ನಾಲ್ಕೈದು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾನುವಾರವೇ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸುವ ನಿರೀಕ್ಷೆ ಇದೆ.
‘ಭಾರಿ ಪ್ರಮಾಣದಲ್ಲಿ ಒಳ ಹರಿವು ಇರುವ ಕಾರಣ ಭಾನುವಾರ ಬೆಳಿಗ್ಗೆ 9 ಗಂಟೆಗೆ ನದಿಗೆ 4 ಸಾವಿರ ಕ್ಯುಸೆಕ್‌ನಿಂದ 6 ಸಾವಿರ ಕ್ಯುಸೆಕ್‌ನಷ್ಟು ನೀರು ಹರಿಸಲಾಗುವುದು. ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು’ ಎಂದು ತುಂಗಭದ್ರಾ ಮಂಡಳಿ ಬೆಳಿಗ್ಗೆ 8.30ಕ್ಕೆ ಪ್ರಕಟಣೆ ಹೊರಡಿಸಿತ್ತು. ಆದರೆ ನಿಗದಿಯಂತೆ 9 ಗಂಟೆಗೆ ನದಿಗೆ ನೀರು ಹರಿಸಿಲ್ಲ. ಬಹುತೇಕ ಸಂಜೆಯ ವೇಳೆಗೆ ಅಥವಾ ಸೋಮವಾರ ನದಿಗೆ ನೀರು ಹರಿಯಬಿಡುವ ಸಾಧ್ಯತೆ ಇದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಹೊಸಪೇಟೆ ನಗರದಲ್ಲಿ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಸುಮಾರು ಅರ್ಧ ಗಂಟೆ ಬಿರುಸಿನ ಮಳೆ ಸುರಿಯಿತು. ಬಳಿಕ ಮಳೆ ಬಿಡುವು ನೀಡಿದ್ದು, ಮೋಡದ ವಾತಾವರಣ ಇದೆ. ಜಿಲ್ಲೆಯ ಇತರ ಭಾಗಗಳಲ್ಲೂ ಬಿರುಸಿನ ಮಳೆ ಆಗಿಲ್ಲ. ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬರುವಂತಾಗಿದೆ.
ಕಳೆದ ವರ್ಷ ಮುಂಗಾರು ಮಳೆ ಅಭಾವ ತೀವ್ರವಾಗಿ ಕಾಡಿತ್ತು. ಒಂದು ತಿಂಗಳು ವಿಳಂಬವಾಗಿ ಆರಂಭವಾದ ಮಳೆ ಬಳಿಕವೂ ಅಂತಹ ಬಿರುಸು ಪಡೆದಿರಲಿಲ್ಲ. ಹೀಗಾಗಿ ಕಳೆದ ವರ್ಷ ಇದೇ ಸಮಯದಲ್ಲಿ ತುಂಗಭದ್ರಾ ಜಲಾಶಯದಲ್ಲಿ 13.71 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಒಟ್ಟಾರೆ ಮಳೆಗಾಲದ ಕೊನೆಯಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬದೆ 89 ಟಿಎಂಸಿ ಅಡಿಯಷ್ಟೇ ತುಂಬಿತ್ತು. 2022ರಲ್ಲಿ ಈ ವರ್ಷದಂತೆ ಭರ್ಜರಿ ಮಳೆಯಾಗಿತ್ತು ಹಾಗೂ ಸುಮಾರು ಒಂದೂವರೆ ತಿಂಗಳ ಕಾಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಜಲಾಶಯದಿಂದ ನದಿಗೆ ನೀರು ಹರಿಸಲಾಗಿತ್ತು. ಆ ವರ್ಷ ಸುಮಾರು 400 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.