ADVERTISEMENT

₹300 ಕೋಟಿಯಲ್ಲಿ ಎತ್ತರದ ಪ್ರದೇಶಗಳಿಗೆ ಕಾಲುವೆ ನೀರು: ಸಚಿವ ಆನಂದ್‌ ಸಿಂಗ್‌

ಪಾಪಿನಾಯಕನಹಳ್ಳಿ ಏತ ನೀರಾವರಿ ಯೋಜನೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 14:03 IST
Last Updated 23 ಮಾರ್ಚ್ 2023, 14:03 IST
   

ಹೊಸಪೇಟೆ (ವಿಜಯನಗರ): ವಿಜಯನಗರ ಕ್ಷೇತ್ರದ ದಕ್ಷಿಣ ಭಾಗದ ಕೆರೆಗಳಿಗೆ ನೀರು ತುಂಬಿಸುವ ತಾಲ್ಲೂಕಿನ ಪಾಪಿನಾಯಕನಹಳ್ಳಿ ಬಹುಗ್ರಾಮ ಏತ ನೀರಾವರಿ ಯೋಜನೆಗೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಗುರುವಾರ ತಾಲ್ಲೂಕಿನ ತಳವಾರಘಟ್ಟ–ವೆಂಕಟಾಪುರ ಸಮೀಪದ ಜಾಕ್‌ವೆಲ್‌ನಲ್ಲಿ ಚಾಲನೆ ನೀಡಿದರು.

ಕರ್ನಾಟಕ ನೀರಾವರಿ ನಿಗಮದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ₹243 ಕೋಟಿ ವೆಚ್ಚದ ಈ ಕಾಮಗಾರಿ 24 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, 27 ತಿಂಗಳಲ್ಲಿ ಮುಕ್ತಾಯಗೊಂಡಿದೆ. 18 ಹಳೆಯ ಕೆರೆಗಳು, ಹೊಸದಾಗಿ ನಿರ್ಮಿಸಿರುವ ನಾಲ್ಕು ಹೊಸ ಕೆರೆಗಳಿಗೆ ಯೋಜನೆಯಡಿ ನೀರು ತುಂಬಿಸಲಾಗುವುದು. 40 ಸಾವಿರ ಎಕರೆಗೆ ಇದರಿಂದ ಪ್ರಯೋಜನವಾಗಲಿದೆ. ವಿಜಯನಗರ ಕ್ಷೇತ್ರದ ಉತ್ತರ ಭಾಗದಲ್ಲಿ ತುಂಗಭದ್ರಾ ನದಿ, ಜಲಾಶಯದ ಕಾಲುವೆಗಳು ಇರುವುದರಿಂದ ಸಮೃದ್ಧವಾಗಿದೆ ಎಂದರು.

ದಕ್ಷಿಣ ಭಾಗ ಮಳೆ ಆಶ್ರಯಿಸಿತ್ತು. ರೈತರ ಬಹುವರ್ಷಗಳ ಬೇಡಿಕೆಯಾಗಿತ್ತು. 2019ರ ಉಪಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಹಿಂದಿನ ಸಿ.ಎಂ. ಬಿ.ಎಸ್‌. ಯಡಿಯೂರಪ್ಪ ಎರಡುವರೆ ವರ್ಷಗಳ ಹಿಂದೆ ಚಾಲನೆ ಕೊಟ್ಟಿದ್ದರು ಎಂದು ನೆನಪಿಸಿದರು.
ಬರುವ ದಿನಗಳಲ್ಲಿ ವಿಜಯನಗರದ ದಕ್ಷಿಣ ಭಾಗದಲ್ಲಿ ₹300 ಕೋಟಿಯಲ್ಲಿ ಯೋಜನೆ ಕೈಗೆತ್ತಿಕೊಂಡು ಎತ್ತರದ ಪ್ರದೇಶಗಳಿಗೂ ನೀರು ಉಣಿಸಲಾಗುವುದು. ಕಾಲುವೆಗಳ ಮೂಲಕ ರೈತರ ಹೊಲಗಳಿಗೆ ನೀರು ಪೂರೈಸಲಾಗುವುದು. ಇದು ನನ್ನ ಮೊದಲ ಆದ್ಯತೆಯಾಗಲಿದೆ. ಹೊಸ ವರ್ಷದಲ್ಲಿ ಹೊಸ ಅಧ್ಯಾಯ, ಹೊಸ ಇತಿಹಾಸ ನಿರ್ಮಿಸೋಣ. ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.

ADVERTISEMENT

ಯೋಜನೆಗೆ ಕಮಲಾಪುರ ಭಾಗದ ರೈತರು ಉತ್ತಮ ಸಹಕಾರ ಕೊಟ್ಟಿದ್ದಾರೆ. ಯಾರು ಕೂಡ ಹಣ ಕೇಳಿಲ್ಲ. ಈ ಕೆಲಸಕ್ಕೆ ಜೆಸ್ಕಾಂ, ಅರಣ್ಯ ಇಲಾಖೆಯವರು ಕೂಡ ಉತ್ತಮ ಸಹಕಾರ ಕೊಟ್ಟಿದ್ದಾರೆ. ಯೋಜನೆ ಪೂರ್ಣಗೊಳಿಸಿದ ಗುತ್ತಿಗೆದಾರರು ಐದು ವರ್ಷ ಇದರ ನಿರ್ವಹಣೆ ಮಾಡುವರು. ಯಾವುದೇ ರೀತಿಯ ಸಮಸ್ಯೆ, ಕಳಪೆ ಕಂಡು ಬಂದರೆ ರೈತರು ನೇರವಾಗಿ ನನಗೆ ತಿಳಿಸಬಹುದು ಎಂದು ರೈತರಿಗೆ ತಿಳಿಸಿದರು.

ಯೋಜನೆ ಸಹಾಯಕ ಎಂಜಿನಿಯರ್ ಯಲ್ಲಪ್ಪ, ಸೂಪರಿಟೆಂಡೆಂಟ್‌ ಎಂಜಿನಿಯರ್ ಎಲ್.ಬಸವರಾಜ, ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್, ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೆ.ಸಿ. ವಿನಯ್, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್ ಅಮಾನುಲ್ಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಗಿರಿ, ಸಂಗಮ್ಮ, ರಘು ನಾಯ್ಕ, ಲಕ್ಷ್ಮಿ ತಾರಾನಗರ, ಲಕ್ಷ್ಮಿ, ವಕ್ಫ್‌ ಬೋರ್ಡ್‌ ಅಧ್ಯಕ್ಷ ಟಿಂಕರ್‌ ರಫೀಕ್‌, ಗುತ್ತಿಗೆದಾರರಾದ ದೊಡ್ಡ ಹನುಮಂತಪ್ಪ, ಜನಾರ್ದನ ರೆಡ್ಡಿ ಇದ್ದರು.

****

ಯಾವ ಗ್ರಾಮಗಳ ಕೆರೆಗಳಿಗೆ ಪ್ರಯೋಜನ?

ಇಂಗಳಗಿ, ಬೈಲುವದ್ದಿಗೇರಿ–2, ಪಾಪಿನಾಯಕನಹಳ್ಳಿ, ಹರಿಜನಕೇರಿ, ಲಕ್ಕಲಕುಂಟೆ, ಕಾಕುಬಾಳ, ಚಿನ್ನಾಪುರ–3, ನಲ್ಲಾಪುರ–2, ಭುವನಹಳ್ಳಿ, ಗಾಳೆಮ್ಮನಗುಡಿ, ಶೆಟ್ರಹಳ್ಳಿ, ಜೋಗಯ್ಯನ ಕೆರೆ, ಕೆರೋಟಿ ಕೆರೆ, ಗಾದಿಗನೂರು.

ಹೊಸ ಕೆರೆಗಳು– ನೀರಿನ ಸಂಗ್ರಹ ಜಲಾಶಯ ಎಲ್ಲೆಲ್ಲಿ: ಕಮಲಾಪುರ (ಮೆಟ್ಟಿನ ಆಂಜನೇಯ ದೇವಸ್ಥಾನ ಬಳಿ, ಕಾಕುಬಾಳು, ಗಾದಿಗನೂರು, ಕೊಟಗಿನಹಾಳ್/ಧರ್ಮಸಾಗರ ಸಂಗ್ರಹಣ ಜಲಾಶಯ.

****
‘ನನ್ನನ್ನು ಪರಮಾತ್ಮ ಕಟ್ಟಿ ಹಾಕಬೇಕು’
‘ನನ್ನನ್ನು ಕಟ್ಟಿ ಹಾಕಲು ಯಾರೇ ಎಲ್ಲಿಂದ ಬಂದರೂ ಆಗುವುದಿಲ್ಲ. ನನ್ನನ್ನು ಪರಮಾತ್ಮ ಮಾತ್ರ ಕಟ್ಟಿ ಹಾಕಬೇಕು. ನನ್ನ ಆಯುಧ ಕ್ಷೇತ್ರದ ಅಭಿವೃದ್ಧಿ. ಅದರಿಂದಲೇ ಉತ್ತರ ಕೊಡುವೆ. ಕ್ಷೇತ್ರದ ಜನ ನನ್ನ ಕವಚ. ಜನರಿಗಾಗಿ ನಾನು ಕೆಲಸ ಮಾಡುವವನು. ಟೀಕೆಗಳಿಗೆ ಉತ್ತರ ಕೊಡಬಾರದು ಅಂದುಕೊಂಡಿದ್ದೇನೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.