ADVERTISEMENT

ವಿಜಯನಗರ: ‘ಕಣ್‌ಮಾಲಾ ಕಣ್ಮಣಿ’ ಪ್ರಶಸ್ತಿಗೆ ಲೇಖಕ ಸುಧಾಕರನ್‌ ಆಯ್ಕೆ

18ರಂದು ಓಣಂ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 8:33 IST
Last Updated 14 ಸೆಪ್ಟೆಂಬರ್ 2022, 8:33 IST
‘ಕೈರಾಲಿ ಕಲ್ಚರಲ್‌ ಅಸೋಸಿಯೇಶನ್‌’ ಅಧ್ಯಕ್ಷ ಎಂ.ಕೆ. ಮಥಾಯ್‌ ಮಾತನಾಡಿದರು.
‘ಕೈರಾಲಿ ಕಲ್ಚರಲ್‌ ಅಸೋಸಿಯೇಶನ್‌’ ಅಧ್ಯಕ್ಷ ಎಂ.ಕೆ. ಮಥಾಯ್‌ ಮಾತನಾಡಿದರು.   

ಹೊಸಪೇಟೆ (ವಿಜಯನಗರ): ‘ಬರುವ ಸೆ. 18ರಂದು ಓಣಂ ಹಬ್ಬವನ್ನು ಸಂಭ್ರಮದಿಂದ ನಗರದ ಟಿ.ಬಿ. ಡ್ಯಾಂ ರಸ್ತೆಯ ಎಂ.ಎಸ್. ತಿರುಮಲೈ ಐಯ್ಯಂಗಾರ್‌ ಹಾಲ್‌ನಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಸಾಲಿನ ‘ಕಣ್‌ಮಾಲಾ ಕಣ್ಮಣಿ’ ಪ್ರಶಸ್ತಿಗೆ ಕೇರಳದ ಕಣ್ಣೂರಿನ ಲೇಖಕ ಸುಧಾಕರನ್‌ ರಾಮಾಂಥಲಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ‘ಕೈರಾಲಿ ಕಲ್ಚರಲ್‌ ಅಸೋಸಿಯೇಶನ್‌’ ಅಧ್ಯಕ್ಷ ಎಂ.ಕೆ. ಮಥಾಯ್‌ ತಿಳಿಸಿದರು.

ಆ ದಿನ ಮಧ್ಯಾಹ್ನ 2.30ಕ್ಕೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿಯು ₹10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಟಿ.ಬಿ. ಡ್ಯಾಂ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌ ಕೂಡ ಪಾಲ್ಗೊಳ್ಳುವರು ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಮಲಯಾಳಿಗಳಿಗೆ ಓಣಂ ವಿಶೇಷ ಹಬ್ಬ. ಪ್ರತಿಯೊಬ್ಬರೂ ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೇ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಆಚರಿಸುತ್ತಾರೆ. ಕಳೆದ 22 ವರ್ಷಗಳಿಂದ ನಗರದಲ್ಲಿ ಓಣಂ ಆಚರಿಸಿಕೊಂಡು ಬರಲಾಗುತ್ತಿದೆ. ಮಲಯಾಳಿಗಳ ಪ್ರತಿಭೆ, ಸಂಸ್ಕೃತಿಗೆ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.

ನಗರದ ಕಾರಿಗನೂರಿನಲ್ಲಿ ‘ಕೈರಾಲಿ ಭವನ’, ವೃದ್ಧಾಶ್ರಮ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 11,000 ಚದರ ಅಡಿ ವಿಸ್ತೀರ್ಣದ ಸಿ.ಎ. ಸೈಟ್‌ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ₹1.2 ಕೋಟಿ ಖರ್ಚು ಬರಲಿದೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಅವರ ಇಲಾಖೆಯಿಂದ ₹50 ಲಕ್ಷ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ. ಮಿಕ್ಕುಳಿದ ಹಣ ಸಂಘ ಸಂಸ್ಥೆಗಳಿಂದ ಸಂಗ್ರಹಿಸಿ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಪಿ. ಸುಂದರನ್‌, ಕಾರ್ಯದರ್ಶಿ ಮನೋಹರ್‌ ಪಿಲ್ಲೈ, ಕಾರ್ಯಕಾರಿ ಸಮಿತಿ ಸದಸ್ಯ ದೇವದಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.