ADVERTISEMENT

ಸಾಹಿತ್ಯ, ಸಂಗೀತ ಪ್ರೀತಿ ಬೆಳೆಸಿಕೊಳ್ಳಿ: ಸಿದ್ದಲಿಂಗೇಶ್ ಕೆ.ರಂಗಣ್ಣನವರ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 15:26 IST
Last Updated 12 ಮಾರ್ಚ್ 2021, 15:26 IST
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಲಕಿಯರು ಆಕರ್ಷಕ ಸಮೂಹ ನೃತ್ಯ ಪ್ರಸ್ತುತಪಡಿಸಿದರು
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಲಕಿಯರು ಆಕರ್ಷಕ ಸಮೂಹ ನೃತ್ಯ ಪ್ರಸ್ತುತಪಡಿಸಿದರು   

ವಿಜಯನಗರ (ಹೊಸಪೇಟೆ): ಮರಿದೇವ ಸಂಗೀತ ಕಲಾವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಭಾಗಿತ್ವದಲ್ಲಿ ಗುರುವಾರ ಸಂಜೆ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವನಾ ಕಾರ್ಯಕ್ರಮ ಜರುಗಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣನವರ್ ಮಾತನಾಡಿ, ‘ಯುವಕರು ಮೊಬೈಲ್‌ ದಾಸರಾಗಿ ಅನಗತ್ಯವಾಗಿ ಮಹತ್ವದ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಿಂದ ಹೊರಬರಬೇಕು. ಸಾಹಿತ್ಯ, ಸಂಗೀತದ ಪ್ರೀತಿ ಬೆಳೆಸಿಕೊಳ್ಳಬೇಕು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವುದು ಕಡಿಮೆಯಾಗಿದೆ. ಆದರೆ, ಅದು ನಮ್ಮ ಜ್ಞಾನವೃದ್ಧಿಗೆ ಸಹಕಾರಿ. ಪುಸ್ತಕ ಪ್ರೇಮ ಬೆಳೆಸಿಕೊಂಡು ಎತ್ತರಕ್ಕೆ ಬೆಳೆಯಬೇಕು’ ಎಂದು ಹೇಳಿದರು.

ADVERTISEMENT

ಮೋಹನ್‌ ಚಿಕ್ಕಭಟ್‌ ಪ್ರವಚನ ಮಾಡಿದರು. ಚಂದನ ಸಮರ್ಥ ಅಂಗಡಿ, ಮೀರಾ, ಮಧುಸೂದನ್‌, ಪಾಂಡುರಂಗ ಅಮೀದಾಲ ಕುಡಿತಿನಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಿ.ಜಿ. ಅಮೃತ, ಗೀತಪ್ರಿಯ ತಂಡ ಸಮೂಹ ನೃತ್ಯ, ಯಲ್ಲಪ್ಪ ಭಂಡಾರದಾರ ಜನಪದ ಗೀತೆ, ನವ್ಯ ಅಂಗಡಿ ತಂಡ ಭಕ್ತಿಗೀತೆ, ಯೋಗೇಶ ಶ್ರೀಧರ್‌ ಮರೋಳ ತಬಲ ವಾದನ ಮಾಡಿದರು. ಭಕ್ತರು ಜಾಗರಣೆ ಮಾಡುತ್ತ ಶುಕ್ರವಾರ ನಸುಕಿನ ಜಾವ 4.30ರ ವರೆಗೆ ಕಾರ್ಯಕ್ರಮ ಕಣ್ತುಂಬಿಕೊಂಡರು.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶ್ ರಾವ್, ಎಎಸ್ಐ ಬಸವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಪಾಲಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ, ತಿಪ್ಪನಗೌಡ ಸುರಪುರ, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ಎಚ್.ಕೆ.ಶರಣೇಶ, ಎ.ದೊಡ್ಡಬಸಪ್ಪ, ಕೆ.ಪಂಪನಗೌಡ ಇದ್ದರು.

ಮಲಪನಗುಡಿ ವರದಿ:

ಶ್ರೀರಾಮ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಮಲಪನಗುಡಿಯಲ್ಲಿ ಗುರುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಯಲ್ಲಪ್ಪ ಭಂಡಾರದಾರ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ, ಕಲ್ಯಾಣಿ ಜನಪದ ಗೀತೆ ಹಾಡಿದರು.

ಇದಕ್ಕೂ ಮುನ್ನ ಮುಖಂಡ ಎಲ್‌. ಸಿದ್ದನಗೌಡ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ, ಡೊಳ್ಳು ಕುಣಿತ ಕಲಾವಿದ ಕಾರಮಂಚಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.