ADVERTISEMENT

ಅಜಯ್ ಸಾವು: ದೇಗಿನಾಳ ಸ್ವಶಾನ ಮೌನ

ಅಲ್ಲಮಪ್ರಭು ಕರ್ಜಗಿ
Published 3 ಡಿಸೆಂಬರ್ 2012, 6:31 IST
Last Updated 3 ಡಿಸೆಂಬರ್ 2012, 6:31 IST

ಚಡಚಣ: ಕಳೆದ ಗುರುವಾರ ವಿಜಾಪುರದ ನೀಲಕಂಠೇಶ್ವರ ಪ್ರಾಥಮಿಕ ಶಾಲೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ 4ನೇ ವರ್ಗದ ವಿದ್ಯಾರ್ಥಿ ಅಜಯ್ ಪ್ರಮೋದ ಜಾಧವನ ಸಾವಿನ ಸುದ್ದಿ ತಿಳಿದು ದೇಗಿನಾಳ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.

ಇಡೀ ಗ್ರಾಮದ ಜನ ದುಃಖದ ಕಡಲಿಲ್ಲಿ ಮುಳುಗಿದ್ದರು. ಮೃತ ಬಾಲಕನ ಶವದ ಆಗಮನವನ್ನೇ ಕಾಯುತ್ತಿದ್ದ ಬಂಧು-ಬಾಂಧವರ ಆಂಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಲ್ಲಿಯೂ ನೀರು ಬರುತ್ತಿತ್ತು.

ಸೋಲಾಪುರದಿಂದ ಮಧ್ಯಾಹ್ನ 2 ಗಂಟೆಗೆ ಪಾರ್ಥೀವ ಶರೀರ ಹೊತ್ತ ಅಂಬುಲೆನ್ಸ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅರ್ತನಾದ ಎಲ್ಲೆ ಮೀರಿತ್ತು. ಬಾಲಕನ ತಂದೆ-ತಾಯಿಯ ರೋದನ, ಅಕ್ಕ ಅಂಕಿತಾ, ಅಣ್ಣ ವಿಜಯ್ ಅವರ ದುಃಖದ ಕಟ್ಟೆ ಒಡೆದು ಹೊಗಿತ್ತು.

ಇಡೀ ಗ್ರಾಮದ ಜನ ತಮ್ಮ ಮನೆ ಬಾಗಿಲುಗಳಿಗೆ ಬೀಗ ಜಡಿದು, ಜಾಧವ ಅವರ ಮನೆಯ ಮುಂದೆ ಬೆಳಿಗ್ಗೆಯಿಂದಲೇ ಕಾಯ್ದು ಕುಳಿತ್ತಿದ್ದರು. ಸುತ್ತಲಿನ ಗ್ರಾಮದ ಜನ ತಂಡೋಪ ತಂಡವಾಗಿ ಟ್ರಕ್ ಮತ್ತಿತರ ವಾಹನಗಳಲ್ಲಿ ಆಗಮಿಸಿ ಬಾಲಕನ ಅಂತಿಮ ದರ್ಶನ ಪಡೆದರು.

ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, `ಇದೊಂದು ಆತಂಕಕಾರಿ ಬೆಳವಣಿಗೆ. ಪಾಲಕರು ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಬೇಕು' ಎಂದರು.

ಮೃತ ಬಾಲಕ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ಪರಿಹಾರ ಕೊಡಿಸುವುದಾಗಿ ಹೇಳಿದರು. ವೈಯಕ್ತಿಕವಾಗಿ ರೂ.10 ಸಾವಿರ ಧನ ಸಹಾಯ ಮಾಡಿದರು. ಸರ್ಕಾರದ ಇತರೆ ಸೌಲಭ್ಯಗಳನ್ನು ಕುಟುಂಬಕ್ಕೆ ಒದಗಿಸಿಕೊಡುವ ಭರವಸೆ ನೀಡಿದರು.

ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ವನಿತ ಎನ್. ತೊರವಿ, `ಮಗುವಿನ ಅತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಶನಿವಾರ ಸೋಲಾಪೂರದ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಜಯ್‌ನೊಂದಿಗೆ ತಾವು ಮಾತನಾಡಿದ್ದು, ತನ್ನ ಆತ್ಮ ಹತ್ಯೆಯ ಯತ್ನಕ್ಕೆ ಯಾರು ಕಾರಣವಲ್ಲ ಎಂದು ಹೇಳಿದ್ದ. ತಾನು ಗುಣ ಮುಖನಾಗಿ ಮತ್ತೆ ಶಾಲೆಗೆ ಹೋಗುವದಾಗಿಯೂ ಹೇಳಿದ್ದ. ಅಜಯ್‌ನ ಸಾವು ದಿಗ್ಭ್ರಮೆ ಮೂಡಿಸಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಮಾಹಿತಿ ಬಂದ ನಂತರ ಸಮಗ್ರ ವರದಿ ನೀಡುತ್ತೇವೆ' ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎನ್. ಹಕೀಂ, `ಅಜಯ್‌ನ ಸಾವು ಇಲಾಖೆಯ ಪ್ರತಿಯೊಬ್ಬರಿಗೂ ಅತೀವ ದುಃಖ ಉಂಟು ಮಾಡಿದೆ. ಅಜಯ್‌ನ ಸಾವಿಗೆ ಯಾರೂ ದೂಷಿಗಳಲ್ಲ. ಈ ಬಗ್ಗೆ ಎಲ್ಲ ಮಗ್ಗುಲಗಳಲ್ಲಿ ತನಿಖೆ ಮಾಡಿದ್ದೇವೆ. ಬಾಲಕನ ಚಿಕಿತ್ಸೆಯ ವೆಚ್ಚವನ್ನು ಶಾಲಾ ಆಡಳಿತ ಮಂಡಳಿ ಭರಿಸಿದೆ.  ಶಿಕ್ಷಣ ಇಲಾಖೆ ರೂ.25 ಸಾವಿರ ಸಹಾಯಧನ ನೀಡಿದೆ' ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಶೈಲಗೌಡ ಬಿರಾದಾರ, ಶಿವಾನಂದ ಅವಟಿ, ಗುರಣಗೌಡ ಪಾಟೀಲ, ಮಾಜಿ ಸದಸ್ಯ ಅಣ್ಣಪ್ಪ ಖೈನೂರ, ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗೋಪಾಲ ಕಾರಜೋಳ ಮುಂತಾದವರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಕುಟುಂಬಕ್ಕೆ ನೆರವು

ಬಾಲಕ ಅಜಯ್‌ನನ್ನು ಉಳಿಸಿಕೊಳ್ಳಲು ನಮ್ಮ ಸಂಸ್ಥೆಯಿಂದ ಸಾಕಷ್ಟು ಪ್ರಯತ್ನ ಪಟ್ಟೆವು. ಚಿಕಿತ್ಸೆಗೆ ರೂ.60 ಸಾವಿರ ಖರ್ಚು ಮಾಡಿದೆವು. ಶನಿವಾರ ಸಂಜೆಯೇ ಆತನ ಯೋಗಕ್ಷೇಮ ವಿಚಾರಿಸಿದ್ದೆ. ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಕೇಳಿ ಸಮಾಧಾನವಾಗಿತ್ತು. ಆತನ ಸಾವು ನಮ್ಮೆಲ್ಲರಿಗೂ ನೋವು ತಂದಿದೆ.

ನಮ್ಮ ಸಂಸ್ಥೆಯ ಆಡಳಿತ ಮಂಡಳಿಯವರು ಸೋಮವಾರ ಸಭೆ ಸೇರುತ್ತಿದ್ದೇವೆ. ಅಜಯ್‌ನ ಕುಟುಂಬಕ್ಕೆ ಯಾವ ನೆರವು ನೀಡಬೇಕು ಎಂಬುದನ್ನು ನಿರ್ಧರಿಸುತ್ತೇವೆ.

ಬಸನಗೌಡ ಪಾಟೀಲ ಯತ್ನಾಳ, ಅಧ್ಯಕ್ಷ, ಸಿದ್ಧೇಶ್ವರ ಸಂಸ್ಥೆ.

ಪಾಲಕರು-ಶಿಕ್ಷಕರ ವಲಯದಲ್ಲಿ ತಲ್ಲಣ ತಂದ ಸಾವು
ವಿಜಾಪುರ: ವಿದ್ಯಾರ್ಥಿ ಅಜಯ್ ದುರಂತ ಸಾವು ಜಿಲ್ಲೆಯ ಪಾಲಕರು ಹಾಗೂ ಶಿಕ್ಷಕರ ವಲಯದಲ್ಲಿ ತಲ್ಲಣ ಮೂಡಿಸಿದೆ. ಕೇವಲ ಹತ್ತು ವರ್ಷದ ಎಳೆಯ ಬಾಲಕ ಆತ್ಮಹತ್ಯೆಯಂತಹ ಘೋರ ಕೃತ್ಯಕ್ಕೆ ಮುಂದಾಗಿದ್ದಾದರೂ ಹೇಗೆ? ಎಂಬ ಚರ್ಚೆಯೇ ಎಲ್ಲೆಡೆ ನಡೆಯುತ್ತಿದೆ.

`ಅಜಯ್ ಪ್ರತಿಭಾವಂತ ವಿದ್ಯಾರ್ಥಿ. ಬಹಳ ಚುರುಕಾಗಿದ್ದ' ಎಂದು ಪಾಲಕರು-ಶಿಕ್ಷಕರು ಹೇಳುತ್ತಿದ್ದಾರೆ.  `ಆತನಲ್ಲಿದ್ದ ಅತಿಯಾದ ಜಾಣ್ಮೆಯೇ ಆತನ ಸಾವಿಗೂ ಕಾರಣವಾಯಿತೇ?' ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

`ರಾಷ್ಟ್ರದಲ್ಲಿಯೇ ವಿಸ್ಮಯ ಮೂಡಿಸಿರುವ ಈ ಪ್ರಕರಣ ಮಕ್ಕಳ ಬದಲಾಗುತ್ತಿರುವ ಮನೋಸ್ಥಿತಿಗೆ ಹಿಡಿದ  ಕನ್ನಡಿ. ಈ ಬಗ್ಗೆ ಅಧ್ಯಯನ ನಡೆಯಬೇಕು' ಎನ್ನುತ್ತಿದ್ದಾರೆ ಕೆಲವರು.

ಇವರು ಹೇಳುವುದು ಏನು?
ನೆರವಿಗೆ ಪತ್ರ
ನಾವು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದಾಗ ಅಜಯ್ ನಮ್ಮಂದಿಗೆ ಮಾತನಾಡಿದ್ದ. ಮರುದಿನವೇ ಆತ ಮೃತಪಟ್ಟಿದ್ದು ನೋವು ತಂದಿದೆ. ಈತನ ಪಾಲಕರು ಕಡುಬಡವರು. ಆಯೋಗದಿಂದ ಅವರಿಗೆ ನೆರವು ನೀಡಲು ಅವಕಾಶ ಇಲ್ಲ. ಈ ಕುಟುಂಬಕ್ಕೆ ನೆರವು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ.
ಎಡ್ವರ್ಡ್ ಥಾಮಸ್. ಸದಸ್ಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ.
ಜಿ.ಪಂ.ನಿಂದ ನೆರವು ಅಜಯ್ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿಯಿಂದ ಸಾಧ್ಯವಿರುವ ನೆರವು ನೀಡಲು ಚಿಂತಿಸುತ್ತೇವೆ.

ADVERTISEMENT

ಶಿವಾನಂದ ಅವಟಿ, ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.