ADVERTISEMENT

ಆಹಾರ ಮೇಳದಲ್ಲಿ ಬಗೆಬಗೆ ತಿನಿಸು

ಪ್ರಕಾಶ ಮಸಬಿನಾಳ
Published 10 ಅಕ್ಟೋಬರ್ 2017, 9:46 IST
Last Updated 10 ಅಕ್ಟೋಬರ್ 2017, 9:46 IST

ಬಸವನಬಾಗೇವಾಡಿ: ಇಲ್ಲಿನ ವಿರಕ್ತಮಠದ ಆವರಣದಲ್ಲಿ ಭಾನುವಾರ ಸಂಜೆ ಅಕ್ಕನಾಗಮ್ಮ ಮಹಿಳಾ ಬ್ಯಾಂಕ್‌ ಹಾಗೂ ಅಕ್ಕನಾಗಮ್ಮ ಮಹಿಳಾ ಸಂಘ ಹಮ್ಮಿಕೊಂಡಿದ್ದ ಆಹಾರ ಮೇಳಕ್ಕೆ ಉತ್ತಮ ಸಂಖ್ಯೆಯಲ್ಲಿ ಜನ ಸೇರಿದ್ದರು.

ಸ್ಥಳದಲ್ಲಿಯೇ ತಯಾರಿಸಿದ ಬಿಸಿ ಬಿಸಿ ಮಿರ್ಚಿ ಹಾಗೂ ಈರುಳ್ಳಿ ಬಜ್ಜಿ, ಬೋಂಡಾ, ಸಮೋಸಾ, ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಬೇಲ್‌ ಪೂರಿ, ಪಾವಬಾಜಿ, ಕಚೋರಿ, ಈರುಳ್ಳಿ ಚೂಡಾ, ಚೌಚೌ ಬಾತ್‌, ವಾಂಗೀ ಬಾತ್‌, ಟೊಮೊಟೊ ಬಾತ್‌ ಹೀಗೆ ವಿವಿಧ ತಿನಿಸುಗಳ ಖರೀದಿ ಭರಾಟೆ ಜೋರಾಗಿತ್ತು.

15 ದಿನಗಳ ಹಿಂದೆ ಸಭೆ ಸೇರಿ ಆಹಾರಮೇಳದಲ್ಲಿ ಬಗೆಬಗೆಯ ಆಹಾರ ಪದಾರ್ಥ ಹಾಗೂ ಕುರಕಲು ತಿಂಡಿ ತಯಾರಿಸುವುದನ್ನು ಹಂಚಿಕೆ ಮಾಡಿಕೊಂಡ ಸಂಘದ ಸದಸ್ಯರು ಹಾಗೂ ಆಸಕ್ತ ಮಹಿಳೆಯರು ತಯಾರಿಸಿದ ಖಾದ್ಯಗಳು ರುಚಿಕರವಾಗಿದ್ದವು. ಎಲ್ಲಾ ತಿನಿಸಿಗೂ ₹ 10 ನಿಗದಿ ಮಾಡಲಾಗಿತ್ತು.

ADVERTISEMENT

ಮಕ್ಕಳು, ಮಹಿಳೆಯರು ಆಹಾರಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ‘ಬಿಸಿ ಬಿಸಿ ಬಜ್ಜಿ ಖರೀದಿಸಲು ಜನರಿಂದ ಬೇಡಿಕೆ ಇತ್ತು. ಆದ್ದರಿಂದ ಹೆಚ್ಚು ಬಜ್ಜಿ ತಯಾರಿಸಿದ್ದೆವು’ ಎಂದು ಸರ್ವಮಂಗಳಾ ಕಡಿವಾಲ, ಸ್ವರೂಪರಾಣಿ ಬಿಂಜಲಬಾವಿ, ರಾಜು ಆಲೂರ ಹೇಳಿದರು.

‘ಮನೆಯಲ್ಲಿ ಎಷ್ಟೇ ಬಾರಿ ಮಾಡಿಕೊಂಡು ತಿಂದರೂ ಆಹಾರಮೇಳದಲ್ಲಿ ಸಿಕ್ಕಷ್ಟು ಖುಷಿ ಸಿಗುವುದಿಲ್ಲ. ಎಲ್ಲರೂ ಒಂದೆಡೆ ಸೇರಲು ಸಾಧ್ಯವಾಗುತ್ತದೆ. ಆದ್ದರಿಂದ ಆಗಾಗ ಈ ರೀತಿಯ ಮೇಳ ನಡೆಯುತ್ತಿರಬೇಕು’ ಎಂದು ಸಾರ್ವಜನಿಕರು ಅನಿಸಿಕೆ ವ್ಯಕ್ತಪಡಿಸಿದರು.

ಗಮನ ಸೆಳೆದ ಹಕ್ಕಿಗೂಡು ತಿನಿಸು: ಹಕ್ಕಿ ಗೂಡು ತಿನಿಸು ಎಲ್ಲರ ಗಮನ ಸೆಳೆಯಿತು. ನೀರಿನಲ್ಲಿ ಕುದಿಸಿದ ಬಟಾಟೆಯಿಂದ ಮಾಡಲಾಗಿದ್ದ ಈ ತಿನಿಸನ್ನು ಹೆಚ್ಚು ಜನ ಸವಿದರು ಎಂದು ತಿನಿಸು ತಯಾರಿಸಿಕೊಂಡು ಬಂದಿದ್ದ ಗಂಗಾ ಬಟ್ಟಲ ಹೇಳಿದರು.

ಕೌಶಲ ತಿಳಿಯಲು ಸಾಧ್ಯ: ಆಹಾರ ಮೇಳಕ್ಕೆ ಅಕ್ಕನಾಗಮ್ಮ ಮಹಿಳಾ ಬ್ಯಾಂಕ್‌ನ ಅಧ್ಯಕ್ಷೆ ಡಾ.ಸುಮಾ ಕಲ್ಲೂರ ಚಾಲನೆ ನೀಡಿ ‘ಮಹಿಳೆಯರು ಸಂಘಗಳನ್ನು ರಚಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಇತರರಲ್ಲಿ ಇರುವ ಕೌಶಲ ತಿಳಿಯಲು ಸಾಧ್ಯ. ಆಹಾರ ಮೇಳ, ಕರಕುಶಲ ತರಬೇತಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದರು.

ಅಕ್ಕನಾಗಮ್ಮ ಮಹಿಳಾ ಬ್ಯಾಂಕ್‌ ಉಪಾಧ್ಯಕ್ಷೆ ಜಯಶ್ರೀ ತೆಗ್ಗಿನಮಠ ಮಾತನಾಡಿ, ‘ಅಕ್ಕನಾಗಮ್ಮ ಮಹಿಳಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೇಳದಲ್ಲಿ ಫ್ಲಾವರ್‌ ಮೇಕಿಂಗ್‌, ಡಾಲ್‌ ಮೇಕಿಂಗ್‌, ಮೆಹಂದಿ, ರಂಗೋಲಿ ಸ್ಪರ್ಧೆ, ಇಳಕಲ್‌ ಸೀರೆಯ ಫ್ಯಾಷನ್ ಷೋ, ಅಡುಗೆ ಮಾಡುವ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆಗಳು ಅ.14ರವರೆಗೆ ನಡೆಯಲಿವೆ’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.