ADVERTISEMENT

ಊರಾಗಿನ ಬಾವಿ, ಕೈಪಂಪು ಒಣಗ್ಯಾವ

​ಪ್ರಜಾವಾಣಿ ವಾರ್ತೆ
Published 26 ಮೇ 2012, 6:25 IST
Last Updated 26 ಮೇ 2012, 6:25 IST
ಊರಾಗಿನ ಬಾವಿ, ಕೈಪಂಪು ಒಣಗ್ಯಾವ
ಊರಾಗಿನ ಬಾವಿ, ಕೈಪಂಪು ಒಣಗ್ಯಾವ   

ಭೈರುಣಗಿ (ತಾ.ಇಂಡಿ): `ಊರಾಗಿನ ಬಾವಿ, ಕೈಪಂಪು ಒಣಗ್ಯಾವ. ಸರ್ಕಾರ ಹೊಲದಾಗ ಬಾವಿ ಹೊಡದೈತಿ. ಆದ್ರ ಅದೂ ಒಣಗಿಹೋಗ್ಯಾದ. ಏನ್ಮಾಡೂದು ಹೇಳ್ರಿ. ದೇವ್ರ ಇಟ್ಟಂಗ ಇರಬೇಕಲ್ರಿ...~ ಎಂದು ಮಲ್ಲಮ್ಮ ಶಾಬಾದಿ, ಗೌರಾಬಾಯಿ ಹಿರೇಮಠ, ಪಾರ್ವತಿ ಹರಿಜನ, ಲಕ್ಷ್ಮಿಬಾಯಿ ಹುಣಸೋರೆ, ಬೌರವ್ವ ಪೂಜಾರಿ, ಕಾಶಿಬಾಯಿ ಪೂಜಾರಿ, ಭೀಮವ್ವ ಪೂಜಾರಿ, ಮಾಳವ್ವ ಪೂಜಾರಿ ಹೇಳಿದರು.

`ಸರ್ಕಾರ ಬೋರ್ ಹೊಡೆದ್ರೂ ಅದು ಒಣಗ್ಯಾದ. ರಮೇಶ ತೇಲಿ ನೀರ ಕೊಟ್ಟಾನ...~ ಎಂದು ಅವರು ಸರ್ಕಾರ ಮತ್ತು ನೀರು ದಾನ ಮಾಡಿದ ರಮೇಶ ತೇಲಿ ಅವರನ್ನು ನೆನಪಿಸಿಕೊಂಡರು.`ಗ್ರಾಮದ ಪ್ರಮುಖ ಅಪ್ಪುಗೌಡ ಪಾಟೀಲ ಜಿಲ್ಲಾ ಪಂಚಾಯಿತಿಯಲ್ಲಿ ಸಾಕಷ್ಟು ಹೋರಾಟ ಮಾಡಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಮಾಡಿಸಿಕೊಂಡಿದ್ದಾರೆ.

ಗ್ರಾಮದ ಜಮೀನೊಂದರಲ್ಲಿ ಬಾವಿ ತೋಡಿಸಿ, ಗ್ರಾಮದಲ್ಲಿ ನಿರ್ಮಿಸಿದ ಮೇಲ್ಮಟ್ಟದ ಟ್ಯಾಂಕ್‌ಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದಾರೆ. ಮಳೆಗಾಲದಲ್ಲಿ ಯಾವುದೇ ಆತಂಕವಿಲ್ಲದೆ ನಿತ್ಯವೂ ನೀರು ಪೂರೈಸಲಾಗುತ್ತದೆ. ಆದರೆ, ಬೇಸಿಗೆ ಬಂತೆಂದರೆ ಸಾಕು. ಬಾವಿ ಬತ್ತುತ್ತಿದೆ~ ಎನ್ನುತ್ತಾರೆ ಗ್ರಾಮಸ್ಥರು.

`ಸರ್ಕಾರ ಇದಕ್ಕೆ ಪೂರಕವಾಗಿ ಒಂದು ಕೊಳವೆ ಬಾವಿ ತೋಡಿಸಿ ನೀರು ಸರಬರಾಜು ಮಾಡುವ ಪ್ರಯತ್ನ ಮಾಡಿದೆ. ಅದರಲ್ಲಿ ಸಾಕಷ್ಟು ನೀರಿದೆ. ಆದರೆ, ಆ ಕೊಳವೆ ಬಾವಿಗೆ ಜೋಡಿಸಿದ ವಿದ್ಯುತ್ ಮೋಟಾರ್ ಇತ್ತೀಚೆಗೆ ಸುಟ್ಟಿದೆ. ಅದನ್ನು ಕೊಳವೆ ಬಾವಿಯಿಂದ ಹೊರ ತೆಗೆದು ರಿಪೇರಿ ಮಾಡಿಸಬೇಕೆಂದರೆ ಅದು ಹೊರಗೆ ಬರುತ್ತಿಲ್ಲ.
 
ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅದನ್ನು ಹೊರತೆಗೆದು ರಿಪೇರಿ ಮಾಡಿಸಿ, ಅದೇ ಕೊಳವೆ ಬಾವಿಗೆ ಜೋಡಿಸಬೇಕು ಎಂಬುದು ನಮ್ಮ ಬೆಡಿಕೆಯಾಗಿತ್ತು. ವಾರದ ಹಿಂದಷ್ಟೇ ಅದೇ ಕೊಳವೆ ಬಾವಿಯ ಹತ್ತಿರ ಮತ್ತೊಂದು ಕೊಳವೆ ಬಾವಿಯನ್ನು ಸರ್ಕಾರ ತೊಡಿಸಿದೆ. ಆದರೆ, ಆ ಕೊಳವೆ ಬಾವಿಗೆ ಒಂದು ಹನಿ ನೀರು ಬಂದಿಲ್ಲ~ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದ ರಮೇಶ ತೇಲಿ ಅವರು ತಮ್ಮ ಜಮೀನಿನಲ್ಲಿಯ ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಕೋಡುತ್ತಿದ್ದಾರೆ. ಈ ನೀರು ಸಾಲದ್ದಕ್ಕೆ ಗ್ರಾಮಸ್ಥರು 2 ಕಿಲೋ ಮೀಟರ್ ಅಂತರದಲ್ಲಿರುವ ಸೋಲಾಪೂರ ಹೆದ್ದಾರಿ ಬಳಿಯ ಕೊಳವೆ ಬಾವಿಯಿಂದ ನೀರು ತರುತ್ತಿದ್ದಾರೆ.

`ನಾವು ಬೇಸಿಗೆಯಲ್ಲಿ ಟ್ಯೂಶನ್‌ಗೆ ಹೋಗಲು ಬಯಸಿದ್ದೆವು. ಆದರೆ, ನೀರಿನ ಸಮಸ್ಯೆ ಹೆಚ್ಚಿದೆ. ಮನೆಗೆ ನೀರು ತರಲಿಕ್ಕಾಗಿ ಟ್ಯೂಶನ್‌ಗೆ ಹೋಗುವುದನ್ನು ಬಿಟ್ಟಿದ್ದೇವೆ~ ಎಂದು ನೀರು ಹೊತ್ತು ಹೊರಟಿದ್ದ ವಿದ್ಯಾರ್ಥಿಗಳಾದ ಬಸು ವಾಲಿಕಾರ, ಪ್ರಕಾಶ ನಿಂಬಾಳ, ಸಿದ್ದಪ್ಪ ಆಶಾಪೂರ, ಅನಿಲ, ಯಲ್ಲಪ್ಪ ಅಳಲು ತೋಡಿಕೊಂಡರು.

`ತಾತ್ಪೂರ್ತಿಕ ಕುಡ್ಯಾಕ ನೀರ ಹ್ಯಾಂಗರೆ ಮಾಡತೀವಿ. ಆದ್ರ ಖಾಯಂ ಕುಡ್ಯಾಕ್ ನೀರ ಬೇಕಂದ್ರ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಬರಬೇಕ್ರಿ. ಆಗ ನಮಗ ಕುಟ್ಯಾಕ್ ನೀರೂ ಸಿಗತಾದ ಮತ್ತು ಹೊಲಗಳಿಗೂ ನೀರಾವರಿ ಆಗತಾದ.

ಈ ಕಾಮಗಾರಿ ತೀವ್ರ ಗೊಳಿಸಬೇಕ್ರಿ~ ಎಂಬುದು ಗ್ರಾಮದ ಪ್ರಮುಖರಾದ ಅಪ್ಪುಗೌಡ ಪಾಟೀಲ, ಶರಣು ಬಿರಾದಾರ, ಶಿವಾನಂದ ವಾಲಿಕಾರ, ಸಿದ್ದು ಅಂದೋಡಗಿ, ರಮೇಶ ಅಂದೋಡಗಿ, ಮಲ್ಲು ಹಂಜಗಿ, ಅಶೋಕಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಹಣಮಂತ ಶಾಬಾದಿ, ಮಹಾದೇವಪ್ಪ ಶಾಬಾದಿ, ಶ್ರೀಶೈಲ ಬಿರಾದಾರ, ಕಲ್ಲು ಅಂದೋಡಗಿ, ಕಲ್ಲು ವಾಲೀಕಾರ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.