ಬಸವನಬಾಗೇವಾಡಿ: ಮಾನವ ಜನಾಂಗದ ಏಳಿಗೆ ಬಯಸುವುದೇ ಎಲ್ಲ ಧರ್ಮಗಳ ಉದ್ದೇಶ ಮತ್ತು ತತ್ವಗಳ ಸಾರವಾಗಿದೆ ಎಂದು ಜಾನಪದ ಸಾಹಿತಿ ಕಾ.ಹು. ವಿಜಾಪೂರ ಹೇಳಿದರು.ಈಚೆಗೆ ತಾಲ್ಲೂಕಿನ ಹಂಗರಗಿ ಗ್ರಾಮದಲ್ಲಿ ಅಂತರರಾಷ್ಟ್ರೀಯ ಕೃಷ್ಣಭಾವನಾಮೃತ ಸಂಘ ಇಸ್ಕಾನ್‌ನ ಗ್ರಾಮ ಘಟಕ ಹಾಗೂ ಪಾನಮುಕ್ತ ಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಗೂ ಗೌರವ ಹಾಳು ಮಾಡಿಕೊಳ್ಳುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮದ ಜನರು ಪಾನಮುಕ್ತ ವಾತಾವರಣ ನಿರ್ಮಿಸಿ, ಇತರರಿಗೆ ಮಾದರಿ ಆಗಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ ಮಾತನಾಡಿ ಇಸ್ಕಾನ್ ಸಂಸ್ಥೆ ಗ್ರಾಮಗಳ ಪರಿವರ್ತನೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಯುವ ಜನಾಂಗ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.ಪ್ರಾಚಾರ್ಯ ಮಲ್ಲಿಕಾರ್ಜುನ ಬಶೆಟ್ಟಿ ಮಾತನಾಡಿ, ಮಹಾತ್ಮಾ ಗಾಂಧೀಜಿ ದೇಶದ ಗ್ರಾಮಗಳನ್ನು ಪಾನಮುಕ್ತ ಮಾಡಬೇಕೆಂದು ಬಯಸಿದ್ದರು. ಆದರೆ ದೇಶವನ್ನು ಆಳಿದ ಜನಪ್ರತಿನಿಧಿಗಳು ಗಾಂಧೀಜಿಯವರ ಅಶಯಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಯುವ ಜನಾಂಗಕ್ಕೆ ನೈತಿಕ ಮೌಲ್ಯ ಬಿತ್ತುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ತಿಳಿಸಿದರು.
ಬೆಳಗಾವಿಯ ಇಸ್ಕಾನ ಮುಖ್ಯಸ್ಥ ನಾಗೇಂದ್ರದಾಸ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಸಜ್ಜನರ ಸಂಘದಿಂದ ವ್ಯಕ್ತಿತ್ವ ಮತ್ತು ಸಮಾಜದ ಪರಿವರ್ತನೆ ಮಾಡಲು ಸಾಧ್ಯವಿದೆ. ವೈಯಕ್ತಿಕ ಹಿತಾಸಕ್ತಿ ಬಿಟ್ಟು ಒಳ್ಳೆಯ ವಿಚಾರ, ಚಿಂತನ ಮಂಥನಗಳಿಂದ ವ್ಯಕ್ತಿಯಲ್ಲಿ ಪರಿವರ್ತನೆ ಕಾಣಬಹುದು. ಬಸವಾದಿ ಶರಣರು, ದಾರ್ಶನಿಕರು ಹಾಗೂ ಮಹಾಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂದು ನುಡಿದರು.
ತಾಪಂ ಸದಸ್ಯ ಬಂದೇನವಾಜ ಡೋಲಚಿ, ಕೆ.ಪಿ. ಬಶೆಟ್ಟಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಬಸಮ್ಮ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಇಲಾಖೆಯ ಶೇಖರ, ಗುರುಪಾದಪ್ಪ ನಂದಿ, ಗಣಪತಿ ಸುಣಗಾರ, ಅಲ್ಲಾಬಕ್ಷ ಚಪ್ಪರಬಂದ, ಸೋಮಪ್ಪ ಚಲವಾದಿ, ಬಸಲಿಂಗಮ್ಮ ಇಂಗಳೇಶ್ವರ, ಮಹಾನಂದಾ ಜನ್ನಾ, ಕೆಂಚನಗೌಡ ಬಿರಾದಾರ, ಹಾಗೂ ಕಾರ್ಯಕ್ರಮದ ರೂವಾರಿ ಸಿದ್ದು ಬಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ನಾಗನಗೌಡ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನಯ್ಯ ಹಿರೇಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.