ಸಿಂದಗಿ: ಚರಂಡಿಯಲ್ಲಿ ನೀರು ಹರಿಯುವುದು ವಾಡಿಕೆ. ಆದರೆ ಪಟ್ಟಣದ ಚರಂಡಿಯಲ್ಲಿ ನೀರು ಹರಿಯುವದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಇಲ್ಲಿರುವುದು ಬರೀ ಕಸದ ರಾಶಿ.
ಪಟ್ಟಣದ ಮೂರನೇ ವಾರ್ಡ್‌ನಲ್ಲಿ ಚರಂಡಿಯ ಅಗತ್ಯವೇ ಇರಲಿಲ್ಲ. ಅದಾಗ್ಯೂ ಭಾರಿ ಗಾತ್ರದ ಚರಂಡಿ ನಿರ್ಮಾಣ ಮಾಡಲಾಗಿದೆ. ಅದೀಗ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ. ಚರಂಡಿ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಸ ಹಾಕಲಾಗಿದೆ.
ಕಸದ ರಾಶಿಯಿಂದಾಗಿ ಸೊಳ್ಳೆಗಳ ಜೊತೆಗೆ ದುರ್ವಾಸನೆಯೂ ಹೆಚ್ಚಿದೆ. ಸುತ್ತಲಿನ ಪ್ರದೇಶದ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಮಕ್ಕಳು ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ.
ಚರಂಡಿಯಲ್ಲಿ ರಾತ್ರಿ ಹೊತ್ತು ಗೊತ್ತಾಗದೇ ಜನ ಬಿದ್ದು ಕೈ, ಕಾಲು ಮುರಿದುಕೊಂಡ ಘಟನೆಗಳೂ ಸಂಭವಿಸಿವೆ.ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾರೊಬ್ಬರೂ ಆಸಕ್ತಿ ತೋರಿ, ಪರಿಹಾರ ಕ್ರಮ ಕೈಗೊಂಡಿಲ್ಲ. ಚರಂಡಿಯನ್ನು ಮುಚ್ಚದಿದ್ದರೆ ನಿವಾಸಿಗಳೇ ಮುಚ್ಚಿ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ ಆಗಲಿದೆ ಎಂಬುದು ಬಿ.ಎನ್. ಶೆಟ್ಟಿ, ಜೆ.ಎಸ್. ಮದರಿ, ಪಿ.ಸಿ. ಪಾಟೀಲ, ಎಸ್.ಸಿ. ಪಾಟೀಲ, ಎಂ.ಎಸ್. ಗುತ್ತೇದಾರ ಮತ್ತಿತರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.