ADVERTISEMENT

ಕಾರ್ಖಾನೆಗೆ ಕಬ್ಬು ಸಾಗಿಸಲು ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 7:30 IST
Last Updated 22 ಫೆಬ್ರುವರಿ 2011, 7:30 IST

ಸಿಂದಗಿ:‘ತಾಲ್ಲೂಕಿನ ಬಮ್ಮನಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಬೆಳೆದ ಕಬ್ಬು ಕಾರ್ಖಾನೆಗೆ ಹೋಗದೆ ಇದ್ದುದರಿಂದ ರೈತರು ಆತಂಕದಲ್ಲಿದ್ದಾರೆ. ಹೀಗಾಗಿ ಕೂಡಲೇ ರೈತರ ಕಬ್ಬು ಬೆಳೆ ಕಾರ್ಖಾನೆಗೆ ಸಾಗಿಸುವಂತೆ ವ್ಯವಸ್ಥೆ ಮಾಡಬೇಕು’ ಎಂದು ಕಬ್ಬು ಬೆಳೆಗಾರರು ತಹಸೀಲ್ದಾರರನ್ನು ಆಗ್ರಹಿಸಿದರು.ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಬಿ.ಎಚ್.ಬಿರಾದಾರ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ತಹಸೀಲ್ದಾರ ಶಿವಾನಂದ ಭಜಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿ.ಎಚ್.ಬಿರಾದಾರ ಮಾತನಾಡಿ, ‘ಈಗಾಗಲೇ ಘತ್ತರಗಿಯ ರೇಣುಕಾ ಶುಗರ್ಸ್‌ ಹಾಗೂ ನಾಗರಹಳ್ಳಿಯ ಉಗಾರ ಶುಗರ್ಸ್‌ನವರು ಈ ಭಾಗದಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದರು. ಈಗ ಹಠಾತ್‌ನೇ ರೈತರು ಕಬ್ಬು ಕಟಾವು ಮಾಡದೇ ಮರಳಿದ್ದಾರೆ. ಇದರಿಂದಾಗಿ ಈ ವರ್ಷ ಕಬ್ಬು ಕಟಾವು ಆಗದೇ ಹಾಗೇ ಉಳಿಯುವ ಪರಿಸ್ಥಿತಿ ಬಂದಿದ್ದರಿಂದ ರೈತರು ತುಂಬಾ ಆತಂಕ ಸ್ಥಿತಿಯಲ್ಲಿದ್ದಾರೆ. ಆಗಲೇ 13-14 ತಿಂಗಳ ಕಬ್ಬಿಗೆ ಇನ್ನೂ ಹಾಗೇ ಬಿಟ್ಟರೆ ರೈತರಿಗೆ ತುಂಬಾ ನಷ್ಟವುಂಟಾಗುತ್ತದೆ. ಕಾರಣ ರೈತರ ಈ ಸಂಕಷ್ಟ ಪರಿಸ್ಥಿತಿಯನ್ನು ಅರಿತು ಒಂದು ವಾರದೊಳಗಾಗಿ ಕಬ್ಬನ್ನು ಕಾರ್ಖಾನೆಗೆ ಕಳುಹಿಸುವ ವ್ಯವಸ್ಥೆ ಆಗದೇ ಇದ್ದರೆ ತಹಸೀಲ್ದಾರ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಬಿರಾದಾರ ಎಚ್ಚರಿಕೆ ನೀಡಿದರು.

ಕಬ್ಬು ಅಭಿವೃದ್ಧಿಮಂಡಳಿ ನಿಗಮ ಸ್ಥಾಪನೆಗೆ ಆಗ್ರಹ
ಸಿಂದಗಿ:
ರಾಜ್ಯದಲ್ಲಿ ಕಬ್ಬು ಅಭಿವೃದ್ಧಿ ಮಂಡಳಿ ನಿಗಮ ಸ್ಥಾಪನೆ ಮಾಡಬೇಕು ಎಂದು ಸಿಂದಗಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘ, ಸಾವಯವ ಕೃಷಿ ಮಷಿನ್ ಜಂಟಿಯಾಗಿ ಸರ್ಕಾರವನ್ನು ಒತ್ತಾಯಿಸಿವೆ.ಈ ಕುರಿತು ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮಂತ ದುದ್ದಗಿ, ಉಪಾಧ್ಯಕ್ಷ ಗುರುಪಾದ ಭಾಸಗಿ, ಸಾವಯವ ಕೃಷಿ ಮಷಿನ್ ಅಧ್ಯಕ್ಷ ಭಾಗಪ್ಪಗೌಡ ಪಾಟೀಲ ಹಾಗೂ ಕಾಂತೂಗೌಡ ಪಾಟೀಲ ಅವರು  ತಾಲ್ಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

2005-06ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕಬ್ಬು ಬೆಳೆದಿದ್ದರಿಂದ ಕಾರ್ಖಾನೆಗೆ ಕಬ್ಬು ಹೋಗದೇ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿ ಬಂತು. ಈ ಅವಧಿಯಲ್ಲಿನ ಕಬ್ಬು ಬೆಳೆಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ಒಟ್ಟು ಕಬ್ಬು ಬೆಳೆ ಪರಿಹಾರದ ಅರ್ಧಭಾಗ ಮಾತ್ರ ಹಣ ನೀಡಿ ಇನ್ನುಳಿದ ಅರ್ಧ ಪರಿಹಾರ ಈ ವರೆಗೂ ನೀಡದೇ ರೈತರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಕೂಡಲೇ ಬಾಕಿ ಉಳಿದ ಕಬ್ಬಿನ ಪರಿಹಾರ ಹಣ ಬಿಡುಗಡೆಗೊಳಿಸಬೇಕು. ಅಲ್ಲದೇ 2010-11ನೇ ಸಾಲಿನಲ್ಲಿ ರೈತರು ಸಾಕಷ್ಟು ಕಬ್ಬು ಬೆಳೆದಿದ್ದಾರೆ. ಈಗಿನ ಕಬ್ಬನ್ನು ಕೂಡ ಕಾರ್ಖಾನೆಯವರು ತೆಗೆದುಕೊಳ್ಳದೇ ರೈತರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತು ಮಾರ್ಚ್ ಅಂತ್ಯದೊಳಗೆ ಕಬ್ಬನ್ನು ನುರಿಸುವ ವ್ಯವಸ್ಥೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.