ADVERTISEMENT

ಕೂಡಗಿ: ಕಾನೂನು ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 11:50 IST
Last Updated 28 ಜನವರಿ 2012, 11:50 IST

ವಿಜಾಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಕೂಡಗಿ ಬಳಿ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ ಸ್ಥಾಪಿಸಲು ಉದ್ದೇಶಿಸಿರುವ ನಾಲ್ಕು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅನುಮತಿ ನೀಡಿದ ಬೆನ್ನಲ್ಲೇ ಕಾನೂನು ಉಲ್ಲಂಘನೆಯ ಆರೋಪ ಕೇಳಿ ಬಂದಿದೆ.

`ಈ ಯೋಜನೆ ಪ್ರಶ್ನಿಸಿ ನಾವು ಈಗಾಗಲೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯ ಅದನ್ನು ವಿಚಾರಣೆಗೆ ಅಂಗೀಕರಿಸಿ ನೋಟೀಸ್ ಜಾರಿ ಮಾಡಿದೆ. ಆದರೂ, ನ್ಯಾಯಾಲಯದಲ್ಲಿ ಯಾವುದೇ ವಿವಾದ ಇಲ್ಲ ಎಂದು ಎನ್‌ಟಿಪಿಸಿಯವರು ಸುಳ್ಳು ಮಾಹಿತಿ ನೀಡಿ ಅನುಮೋದನೆ ಪಡೆದುಕೊಂಡಿದ್ದಾರೆ~ ಎಂದು ಈ ಯೋಜನೆ ವಿರೋಧಿ ಹೋರಾಟದ ನೇತೃತ್ವ ವಹಿಸಿರುವ ಮಸೂತಿಯ ಪರಿಸರ ರಕ್ಷಣಾ ಸೇವಾ ವೇದಿಕೆಯ ಅಧ್ಯಕ್ಷ, ನಿವೃತ್ತ ಅಣು ವಿಜ್ಞಾನಿ ಎಂ.ಪಿ. ಪಾಟೀಲ ಆರೋಪಿಸಿದ್ದಾರೆ.

`ಸೆಪ್ಟೆಂಬರ್ 14ರಂದೇ ಹೈಕೋರ್ಟ್ ನಮ್ಮ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ. ಯೋಜನಾ ಪ್ರದೇಶದಲ್ಲಿ ಶೇ.50ರಷ್ಟು ನೀರಾವರಿ ಜಮೀನು ಇದೆ. ಆದರೆ, ಎನ್‌ಟಿಪಿಸಿಯವರು ಶೇ.97ರಷ್ಟು ಬರಡು ಜಮೀನು ಇದೆ. ಯಾವ ನ್ಯಾಯಾಲಯಗಳಲ್ಲಿಯೂ ಕಾನೂನು ವಿವಾದ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಾವು ನ್ಯಾಯಾಲಯದ ಗಮನ ಸೆಳೆಯುತ್ತೇವೆ~ ಎಂದೂ ಅವರು ಹೇಳಿದರು.

`ಆಲಮಟ್ಟಿ ಜಲಾಶಯದ ಹಿನ್ನೀರಿನ ಸನಿಹವೇ ಈ ಸ್ಥಾವರ ಸ್ಥಾಪನೆಯಾಗಲಿದೆ. ಇಲ್ಲಿ ಸಂಗ್ರಹಿಸುವ ಬೂದಿಯು ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಹರಿದು ಹೋದರೆ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯಕ್ಕೆ ಅಪಾಯವಾಗಲಿದೆ. ಅದರ ಜೊತೆಗೆ ಪರಿಸರ, ಜನ-ಜಾನುವಾರು, ವನ್ಯರಾಶಿಗಳ ಮೇಲೂ ಈ ಯೋಜನೆ ಹಾನಿಯನ್ನುಂಟು ಮಾಡಲಿದೆ~ ಎಂಬುದು ಈ ಪರಿಸರ ರಕ್ಷಣಾ ಸೇವಾ ವೇದಿಕೆಯ ಆರೋಪ.

`ಜನ ಮುಗ್ದರು. ಈ ಯೋಜನೆಯಿಂದ ಉಂಟಾಗುವ ದುಷ್ಪರಿಣಾಮಗಳ ಅರಿವು ಅವರಿಗಿಲ್ಲ. ಇಂದಲ್ಲ ನಾಳೆ ಅದು ಅವರ ಅರಿವಿಗೆ ಬಂದೇ ಬರುತ್ತದೆ. ವಿದ್ಯುತ್ ಯೋಜನೆಗೆ ನಮ್ಮ  ವಿರೋಧವಿಲ್ಲ. ಈ ಸ್ಥಾವರಕ್ಕೆ ಆಯ್ದುಕೊಂಡಿರುವ ಸ್ಥಳ ಸೂಕ್ತವಲ್ಲ. ನಮ್ಮ ಈ ವಾದದಲ್ಲಿ ಹುರುಳಿಲ್ಲ ಎಂದಾದರೆ ಸರ್ಕಾರ ಅದನ್ನಾದರೂ ಹೇಳಲಿ~ ಎಂಬುದು ಪಾಟೀಲರ ಆಗ್ರಹ.

ಈ ಸ್ಥಾವರಕ್ಕೆ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಗ್ರಾಮಗಳ ವ್ಯಾಪ್ತಿಯ ಮೂರು ಸಾವಿರ ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಈ ಘಟಕ್ಕೆ ಎನ್‌ಟಿಪಿಸಿ 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಪ್ರಥಮ ಹಂತದಲ್ಲಿ ತಲಾ 800 ಮೆಗಾ ವ್ಯಾಟ್ ಸಾಮರ್ಥ್ಯದ ಮೂರು (2400 ಮೆಗಾ ವ್ಯಾಟ್) ಹಾಗೂ ಎರಡನೆ ಹಂತದಲ್ಲಿ ಅಷ್ಟೇ ಸಾಮರ್ಥ್ಯದ ಎರಡು ಘಟಕಗಳನ್ನು ಸ್ಥಾಪಿಸಲಿದೆ. ಎನ್‌ಟಿಪಿಸಿ ಈಗಾಗಲೆ ವಿಜಾಪುರದಲ್ಲಿ ಕಚೇರಿಯನ್ನೂ ಆರಂಭಿಸಿದ್ದು, ಸ್ವಾಧೀನ ಪಡಿಸಿಕೊಂಡ ಭೂಮಿಗೆ ಗಡಿ ನಿರ್ಮಿಸುವ ಕೆಲಸ ಆರಂಭಿಸಿದೆ.

`ಸ್ಥಾವರದ ಪ್ರಥಮ ಹಂತದ ಯೋಜನೆಗೆ ಬೇಕಿರುವಷ್ಟು ಜಮೀನನ್ನು ಸ್ವಾಧೀನ ಪಡಿಸಿಕೊಂಡು ರೈತರಿಗೆ 123 ಕೋಟಿ ರೂಪಾಯಿ ಪರಿಹಾರ ಪಾವತಿಸಲಾಗಿದೆ. ಖುಷ್ಕಿ ಭೂಮಿಗೆ 5.50 ಲಕ್ಷ ಹಾಗೂ ನೀರಾವರಿ ಜಮೀನಿಗೆ 7 ಲಕ್ಷ ರೂಪಾಯಿ ದರ ನಿಗದಿ ಪಡಿಸಲಾಗಿದೆ. ಉಳಿದ ರೈತರೂ ಜಮೀನು ಕೊಡಲು ಸಿದ್ಧರಿದ್ದು, ದರ ಪರಿಷ್ಕರಿಸುವಂತೆ ಮನವಿ ಮಾಡಿದ್ದಾರೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

`ಈ ಯೋಜನೆಯ ಕುರಿತು ಕೇಂದ್ರ ಇಂಧನ ಸಚಿವ ಸುಶೀಲ್‌ಕುಮಾರ ಶಿಂಧೆ ಅವರೊಂದಿಗೆ ಈಗಾಗಲೆ ಚರ್ಚಿಸಲಾಗಿದೆ. ಬಜೆಟ್ ಅಧಿವೇಶನದ ನಂತರ ಕೇಂದ್ರ ಸಚಿವರು, ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು~ ಎಂದು ಅವರು ತಿಳಿಸಿದ್ದಾರೆ.

ಸ್ಪಷ್ಟನೆ: ಪ್ರಸ್ತುತ ಕೂಡಿಗೆ ಶಾಖೋತ್ಪನ್ನ ವಿದ್ಯುತ್ ಕೇಂದ್ರವು ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿಗೆ ಸೇರಿದ್ದು. ಇದರಲ್ಲಿ ಅನಧೀಕೃತ ಅಥವಾ ಕಾನೂನು ಬಾಹಿರ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಎಲ್ಲ ನಿಯಮಾವಳಿಗಳನ್ನು ಪಾಲಿಸಿಯೇ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಅನುಮತಿ ಪಡೆಯಲಾಗಿದೆ ಎಂದು ಎನ್‌ಟಿಪಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.