ADVERTISEMENT

ಕೆರೆ ತೆರವು ವಿರೋಧಿಸಿ ಸಂತ್ರಸ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 5:45 IST
Last Updated 16 ಮಾರ್ಚ್ 2011, 5:45 IST

ಮುದ್ದೇಬಿಹಾಳ: ಪಟ್ಟಣದ ಕೆರೆ ಅಭಿವೃದ್ಧಿಗೆ ಮುನ್ನ ಅದರ ಸುತ್ತ ಕಳೆದ 35-40 ವರ್ಷಗಳಿಂದ ವಾಸಿಸುತ್ತಿರುವ ತಮ್ಮನ್ನು ಬೀದಿಪಾಲು ಮಾಡದೇ  ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸಂತ್ರಸ್ತ ಬಡಾವಣೆ ನಿವಾಸಿಗಳು ನಡೆಸುತ್ತಿರುವ ಧರಣಿ ಮಂಗಳವಾರ ಎರಡನೆಯ ದಿನಕ್ಕೆ ಕಾಲಿಟ್ಟಿದೆ.ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ನಾಗರಿಕರನ್ನು ಭೇಟಿ ಮಾಡಿ ಅವರ ಹೋರಾಟಕ್ಕೆ ಬೆಂಬಲಿಸಿದ ಮಾಜಿ ಶಾಸಕ ಎಂ.ಎಂ. ಸಜ್ಜನ, ಜನತೆಯನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಸಂತ್ರಸ್ತ ಜನತೆಗೆ ಮಾನವೀಯ ನೆಲೆಯಲ್ಲಿ ಅಗತ್ಯ ನೆರವು ನೀಡುವಂತೆ ಆಗ್ರಹಿಸಿದರು.

ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್. ಮಾಗಿ, ಅಡಿವೆಪ್ಪ ಕಡಿ, ಯುವ ಮುಖಂಡ ಅರವಿಂದ ಕೊಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಂತ್ರಸ್ತರಿಗೆ ಬೆಂಬಲ ಸೂಚಿಸಿದರು.
ಇದಕ್ಕೂ ಮುನ್ನ ಸತ್ಯಾಗ್ರಹ ನಡೆಸುತ್ತಿದ್ದ ಜನರನ್ನು ತಹಸೀಲ್ದಾರ ಗಂಗಪ್ಪ ಭೇಟಿ ಮಾಡಿ ಧರಣಿಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಪ್ರಯತ್ನ ಮಾಡಿದರು. ಆದರೆ ಅದಕ್ಕೆ  ಧರಣಿ ನಿರತರು ಸ್ಪಂದಿಸಲಿಲ್ಲ. ತಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

‘ಶಿರೋಳ ರಸ್ತೆಯ ಆಶ್ರಯ ಮನೆಗಳನ್ನು ಯಾವ ಆಧಾರದ ಮೇಲೆ ನಮಗೆ ನೀಡುತ್ತಿದ್ದೀರಿ, ಅದರ ನಿಜವಾದ ಹಕ್ಕು ಪತ್ರ ಪಡೆದವರು ಬಂದರೆ ಯಾರನ್ನು ಬಿಡಿಸುತ್ತಿರಿ?’ ಎಂದು ಪ್ರಶ್ನಿಸಿದ ಅವರು, ತಮಗೆ ಸದ್ಯ ಪುರಸಭೆಯು ನಿರ್ಮಿಸುತ್ತಿರುವ ವಾಜಪೇಯಿ ನಗರ ಯೋಜನೆಯಲ್ಲಿ ಮನೆ ನೀಡಿ ಶಾಶ್ವತ ಪರಿಹಾರ ನೀಡುವಂತೆ ವಿನಂತಿಸಿದರು. ಪುರಸಭೆ ಅಧಿಕಾರಿಗಳಾದ ಅರವಿಂದ ಜಮಖಂಡಿ, ಹಾಲವರ ಉಪಸ್ಥಿತರಿದ್ದರು.

ಎರಡನೆಯ ದಿನದ ಧರಣಿಯಲ್ಲಿ ಲಾಳೇಮಶ್ಯಾಕ ಮೂಕಿಹಾಳ, ಭಾಷಾಸಾಬ ಸಾತಿಹಾಳ, ಐ.ಜಿ.ಕಡಿ, ಭೈರನಾಥ ಪವಾರ, ರಜಾಕ ಮಕಾನದಾರ, ಗಣಪತಿ ಪವಾರ, ಮೇಘನಾಥ ಪವಾರ, ದಾವಲಸಾಬ ಸಾತಿಹಾಳ, ಅಪ್ಪಣ್ಣ ಸಾಳಂಕಿ, ಅಮೀರ ರಮಜಾನ ಹಿರೇಮನಿ ಮೊದಲಾದವರು ಪಾಲ್ಗೊಂಡಿದ್ದರು. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.