ADVERTISEMENT

ಕೊಳವೆ ಬಾವಿ: ವಿಜು ಹೇಳಿಕೆ ಸುಳ್ಳು

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 6:00 IST
Last Updated 14 ಜುಲೈ 2012, 6:00 IST

ವಿಜಾಪುರ: `ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 90 ಕೊಳವೆಬಾವಿ ಕೊರೆಸಿದ್ದಾಗಿ ಜೆಡಿಎಸ್‌ನ ವಿಜಯಕುಮಾರ ಪಾಟೀಲರು ಹೇಳುತ್ತಿರುವುದು ಶುದ್ಧ ಸುಳ್ಳು. ಸತ್ಯಶೋಧನಾ ಸಮಿತಿ ಇಡೀ ಮತಕ್ಷೇತ್ರದಲ್ಲಿ ಸಂಚರಿಸಿ ನಡೆಸಿದ ಸಮೀಕ್ಷೆ ಈ ಅಂಶ ಖಚಿತವಾಗಿದೆ~ ಎಂದು ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ `ಸತ್ಯಶೋಧನಾ ಸಮಿತಿ~ಯವರು ಹೇಳಿದರು.

ಶುಕ್ರವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಎಸ್. ಅಳ್ಳೊಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅರ್ಜುನ ರಾಠೋಡ, ಸೋಮನಾಥ ಬಾಗಲಕೋಟ, ಜಿ.ಪಂ. ಸದಸ್ಯರಾದ ತಮ್ಮಣ್ಣ ಹಂಗರಗಿ, ಉಮೇಶ ಕೋಳಕುರ, ಬಾಪುಗೌಡ ಪಾಟೀಲ, ದೇವಾನಂದ ಚವ್ಹಾಣ ಮತ್ತಿತರರು ಈ ಮಾಹಿತಿ ನೀಡಿದರು.

`ಬಬಲೇಶ್ವರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು, ಅದನ್ನು ಪರಿಹರಿಸಲು ಮತಕ್ಷೇತ್ರದಾದ್ಯಂತ 90 ಕೊಳವೆ ಬಾವಿಗಳನ್ನು ಸ್ವಂತ ಖರ್ಚಿನಿಂದ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕೊರೆಯಿಸಿದ್ದೇನೆ. ಇದಕ್ಕಾಗಿ ನನ್ನ ಹೊಲ ಮಾರಿದ್ದೇನೆ ಎಂದು ಜೆಡಿಎಸ್‌ನ ವಿಜಯಕುಮಾರ ಪಾಟೀಲರು ಬಬಲೇಶ್ವರದ ಸಭೆಯಲ್ಲಿ ಹೇಳಿದ್ದರು.

ಆ ಕೊಳವೆಬಾವಿಗಳ ವಿವರ ನೀಡುವಂತೆ ಸವಾಲು ಹಾಕಿದ್ದರೂ ಅವರಿಂದ ಉತ್ತರ ಬರಲಿಲ್ಲ. ಅವರ ಹೇಳಿಕೆ ಕುರಿತು ವಾಸ್ತವಾಂಶ ತಿಳಿದುಕೊಳ್ಳಲು ಸತ್ಯ ಶೋಧನಾ ಸಮಿತಿಯನ್ನು ರಚಿಸಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಖುದ್ದು ಸಂಚರಿಸಿ, ಅಲ್ಲಿನ ಜನ, ಸ್ಥಳೀಯ ಜನಪತ್ರಿನಿಧಿಗಳು- ಪಂಚಾಯಿತಿ ಅಧಿಕಾರಿಗಳನ್ನು ಭೇಟಿಮಾಡಿದೆವು. ಪಂಚಾಯತ ರಾಜ್ ಎಂಜನಿಯರಿಂಗ್, ಹೆಸ್ಕಾಂ ಮೂಲಕ ಮಾಹಿತಿ ಸಂಗ್ರಹಿಸಿ ವಾಸ್ತವಂಶಗಳನ್ನು ಕಲೆಹಾಕಿದ್ದೇವೆ~ ಎಂದು ಹೇಳಿದರು.

`ವಿಜಯಕುಮಾರ ಪಾಟೀಲರು ಕೊಳವೆ ಬಾವಿ ಕೊರೆಯಿಸಿರುವ ಸ್ಥಳ, ನೀರಿನ ಲಭ್ಯತೆ, ಜಿಯಾಲಜಿಸ್ಟ್‌ರಿಂದ ಅಧಿಕೃತ ಅನುಮೋದನೆ, ಆ ಬೋರವೆಲ್‌ಗೆ ಮೋಟಾರ್ ಪಂಪು-ಕೈಪಂಪು ಮತ್ತು ವಿದ್ಯುತ್ ಸಂಪರ್ಕ ಅಳವಡಿಸಿದ್ದಾರೆಯೇ? ಅಲ್ಲಿನ ನೀರು ಖಾಸಗಿ-ಸಾರ್ವಜನಿಕ ಬಳಕೆ ಆಗುತ್ತಿದೆಯೇ? ಅದಕ್ಕೆ ಸಂಬಂಧಿಸಿದ ಹಣಕಾಸು ವೆಚ್ಚವನ್ನು ಯಾರು ಭರಿಸಿದ್ದಾರೆ? ಎಂಬ ಪ್ರಶ್ನಾವಳಿ ಇಟ್ಟುಕೊಂಡು ಉತ್ತರಗಳನ್ನು ಪಡೆದಿದ್ದು, ಪ್ರತಿ ಉತ್ತರಕ್ಕೂ ಸಂಬಂಧಿಸಿದ ಗ್ರಾಮಗಳ ಪ್ರಮುಖರ ಹಾಗೂ ಹಲವು ಕಡೆ ಪಂಚಾಯಿತಿ ಅಧಿಕಾರಿಗಳ ಸಹಿ ಪಡೆಯಲಾಗಿದೆ~ ಎಂದರು.

`ಟಕ್ಕಳಕಿ ತಾಂಡಾ ನಂ-1, ಹೊನವಾಡ ಗ್ರಾಮದ ಮರಾಠ ಓಣಿ, ಹರನಾಳ ಗ್ರಾಮದ ಅಂಬಲಿ ವಸ್ತಿ, ಬಬಲೇಶ್ವರ ಗ್ರಾಮದ ಆಶ್ರಯ ಕಾಲೋನಿ ಹಾಗೂ ಹರಿಜನ ಕೇರಿ, ಬೋಳಚಿಕ್ಕಲಕಿ ಗ್ರಾಮದ ಜನತಾ ವಸ್ತಿ ಹೀಗೆ ಕೇವಲ ಆರು ಕೊಳವೆ ಬಾವಿಗಳನ್ನು ಜೆಡಿಎಸ್‌ನ ವಿಜಯಕುಮಾರ ಪಾಟೀಲ ಕೊರೆಯಿಸಿದ್ದಾಗಿ ಜನತೆ ತಿಳಿಸಿದ್ದಾರೆ.
 
ಟಕ್ಕಳಕಿ ಎಲ್.ಟಿ. ನಂ-1, ಗ್ರಾಮಸ್ಥರೇ ಮೋಟಾರ್ ಅಳವಡಿಕೊಂಡಿದ್ದು, ಬಬಲೇಶ್ವರ ಗ್ರಾಮದಲ್ಲಿ 2 ಕೊಳವೆ ಬಾವಿಗಳಿಗೆ ಗ್ರಾಮ ಪಂಚಾಯಿತಿಯಿಂದ ಒಂದು ಕೈಪಂಪು ಮತ್ತು ಒಂದು ಮೋಟಾರ್ ಅಳವಡಿಸಲಾಗಿದೆ. ಬೋರವೆಲ್‌ಗಳಿಗೆ ಹಣವನ್ನು ಯಾರು ಸಂದಾಯ ಮಾಡಿದ್ದಾರೆ ಎಂದು ವಿವರ ನೀಡುವಂತೆ ಬೋರ್‌ವೆಲ್ ಏಜನ್ಸಿಗಳಿಗೆ ಪತ್ರ ಬರೆಯಲಾಗಿದೆ. ಅವರ ಉತ್ತರದ ನಿರೀಕ್ಷೆಯಲ್ಲಿ ಇದ್ದೇವೆ. ಇದನ್ನು ಹೊರತುಪಡಿಸಿದರೆ ಇಡೀ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಅವರು ಕೊರೆಯಿಸಿರುವುದಾಗಿ ಹೇಳಿಕೊಂಡಿರುವ ಬೋರವೆಲ್‌ಗಳು ಕಂಡು ಬಂದಿರುವುದಿಲ್ಲ~ ಎಂದು ಹೇಳಿದರು.

`ಜೀವ ಜಲಧಾರೆ ಹೆಸರಿನಲ್ಲಿ ವಿಜಯಕುಮಾರ ಪಾಟೀಲರ ಭಾವ ಚಿತ್ರ ಇರುವ ಟ್ಯಾಂಕರ್ ಮೂಲಕ ಜಾತ್ರೆ, ಸಂತೆ, ಮದುವೆ ಇತ್ಯಾದಿ ಸ್ಥಳಗಳಿಗೆ ನೀರು ಸರಬರಾಜು ಮಾಡುತ್ತಿದೆ. ಆ ನೀರು ಶುದ್ಧವಾಗಿಲ್ಲ. ಅದನ್ನು ಜನ ಕುಡಿಯಬಾರದು ಎಂದು ಮನವಿ ಮಾಡಿದ್ದೇವೆ~ ಎಂದ ಅವರು, ಕೊಳವೆಬಾವಿಗಳ ಈ ಕುರಿತು ಮಾಹಿತಿಯನ್ನು ಅವರ ಈಗಲೂ ಬಿಡುಗಡೆ ಮಾಡಬಹುದು. ಜಂಟಿ ಸಮೀಕ್ಷೆಗೆ ತಾವು ಸಿದ್ಧ ಎಂದು ಸವಾಲು ಹಾಕಿದರು.

ಪ್ರಮುಖರಾದ ವಿ.ಎಸ್. ಪಾಟೀಲ, ರಾಜುಗೌಡ ಪೋಲಿಸಪಾಟೀಲ, ಶ್ರಿಶೈಲಗೌಡ ಪಾಟೀಲ, ದೇವಾನಂದ ಅಲಗೊಂಡ, ಸೋಮನಾಥ ಕಳ್ಳಿಮನಿ, ಡಾ.ಪ್ರಕಾಶ ಬಿರಾದಾರ, ಸಿದ್ದುಗೌಡನವರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.