ADVERTISEMENT

ಚರಗದೂಟದ ಸವಿಯುಂಡ ಭೂಸನೂರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:12 IST
Last Updated 2 ಜನವರಿ 2014, 6:12 IST

ಸಿಂದಗಿ: ರೈತರ ಹಬ್ಬ ಎಳ್ಳ ಅಮಾವಾಸ್ಯೆ ಚರಗಾ ಚೆಲ್ಲುವ ಹಬ್ಬವನ್ನು   ನಗರದಲ್ಲಿ ರೈತರು ಸಡಗರದಿಂದ ಆಚರಿಸಿದರು.
ನಗರದ ಲೋಣಿ ಅವಿಭಕ್ತ ಕುಟುಂಬದವರ ತೋಟದಲ್ಲಿ ಶಾಸಕ ರಮೇಶ ಭೂಸನೂರ ಸಮ್ಮುಖ­ದಲ್ಲಿ ನೂರಾರು ಜನರು ಚರಗದೂಟದ ಆತಿಥ್ಯವನ್ನು ಸ್ವೀಕರಿಸಿದರು.

ಆರಂಭದಲ್ಲಿ ತೋಟದಲ್ಲಿನ ಬೆಳೆಗಳಿಗೆ ಪೂಜಿಸಿ ನೈವೇದ್ಯ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ಕಾರ್ಯ ಪೂರೈಸಲಾಯಿತು. ನಂತರ ಅತಿಥಿಗಳಿಗೆ ಚರಗದೂಟ ವಿಶೇಷ ಭೋಜನ ಸಿದ್ದವಾಗಿತ್ತು. ಸಜ್ಜಿ ಕಡಬ, ಸಜ್ಜಿ ರೊಟ್ಟಿ, ಚಪಾತಿ, ಪುಂಡಿ ಪಲ್ಲೆ, ಕಾಳಿನ ಪಲ್ಲೆ,  ಬದನೆಕಾಯಿ, ಶೇಂಗಾ ಚಟ್ನಿ, ಮೊಸರು, ಹತ್ತರಕಿ ಪಲ್ಲೆ, ಮೆಂತೆ ಪಲ್ಲೆ, ಹೂರಣದ ಹೋಳಿಗೆ, ತುಪ್ಪ ಹೀಗೆ ಭಕ್ಷ್ಯ ಭೋಜನ ಸಿದ್ಧಪಡಿಸಿಕೊಂಡು ಮುಂಜಾನೆ ತೋಟಕ್ಕೆ ತಲುಪಿ ಬೆಳೆಗಳಿಗೆ ಪೂಜಿಸಿ ನೈವೇದ್ಯ ಅರ್ಪಿಸುವ ಮೂಲಕ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಪೂರೈಸಿದರು. ನಂತರ ಎಲ್ಲ ಅತಿಥಿಗಳಿಗೆ ಹಬ್ಬದೂಟ ಉಣಬಡಿಸಲಾಯಿತು.

ಸಂಜೆ  ತನಕ ಸಂಭ್ರಮದ ಚಟುವಟಿಕೆಗಳನ್ನು ನಡೆಸಿ ಸಂಜೆ ಹೊತ್ತು ರೈತರು ತಮ್ಮ ಕುಟುಂಬದೊಂದಿಗೆ ಎತ್ತಿನ ಗಾಡಿಯಲ್ಲಿ ಕುಳಿತುಕೊಂಡು ‘ಚಾಂಗೆ ಬೋಲೋ ಕಿಚಡಿ ಬೋಲೋ’ ಎಂದು ಕೇಕೆ ಹಾಕುತ್ತ  ಮನೆಗಳಿಗೆ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
‘ಗರ್ಭವತಿಯಾಗಿರುವ ಭೂಮಿ­ತಾಯಿಗೆ ಉಡಿ ತುಂಬುವ ಜನಪದ ಆಚರಣೆಯೇ ಚರಗ’ ಎಂದು  ಕವಯತ್ರಿ ಗೀತಾ ಲೋಣಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಲೋಣಿ ಅವಿಭಕ್ತ ಕುಟುಂಬದ ಪ್ರಮುಖರಾದ ಈರಪ್ಪ, ಶೇಖಪ್ಪ, ವಿರೂಪಾಕ್ಷಿ, ಪ್ರಭುಲಿಂಗ  ಹಾಗೂ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಶಿವ ಸಿಂಪಿಗೇರ ಸಮಾಜದ ಮುಖ್ಯಸ್ಥ ಬಂಡೆಪ್ಪ ಸರ್, ಹೆಸ್ಕಾಂ ಎಇಇ ಎಸ್.ಎ ಬಿರಾದಾರ, ಹವಲ್ದಾರ, ಮಲಕಾಜಪ್ಪ ಉಪ್ಪಿನ, ಗಂಗಾಧರ ಬಮ್ಮಣ್ಣಿ  ಮತ್ತು ಆಪ್ತರು, ಸ್ನೇಹಿತರು ಹೀಗೆ ನೂರಾರು ಜನರು ಉಪಸ್ಥಿತರಿದ್ದರು.
ಪುಟಾಣಿಗಳು ಖುಷಿ, ಖುಷಿಯಾಗಿ ತೋಟದ ತುಂಬೆಲ್ಲಾ ಓಡಾಡುತ್ತ ರೈತರ ಹಬ್ಬಕ್ಕೆ ಕಳೆ ತಂದು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.